ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಡಿಯನ್ ಟೀಮ್ನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅನಾರೋಗ್ಯದ ಕಾರಣ ಬೆಂಗಳೂರಿಗೆ ಮರಳಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯಕ್ಕೆ ದ್ರಾವಿಡ್ ಅಲಭ್ಯರಾಗಲಿದ್ದಾರೆ. ಕೊಚ್ ಇಲ್ಲದೇ ಮೂರನೇ ಪಂದ್ಯವನ್ನು ಭಾರತ ಆಡಬೇಕಿದೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ) ನಿರ್ದೇಶಕರಾಗಿರುವ ವಿವಿಎಸ್ ಲಕ್ಷ್ಮಣ್ ಮೂರನೇ ಪಂದ್ಯಕ್ಕೆ ಕೋಚ್ ಆಗುವ ಸಾಧ್ಯತೆ ಇದೆ. ಇಂಡಿಯನ್ ಕ್ರಿಕೆಟ್ನ ವಾಲ್ ಎಂದೇ ಕರೆಸಿಕೊಳ್ಳುತ್ತದ್ದ ದ್ರಾವಿಡ್ ಅವರ ಆರೋಗ್ಯ ಸಮಸ್ಯೆ ಏನು ಎಂಬುದು ತಿಳಿದು ಬಂದಿಲ್ಲ.
ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ತಮ್ಮ 50ನೇ ಜನ್ಮ ದಿನಾಚರಣೆಯನ್ನು ಇದೇ ಬುಧವಾರ ಆಚರಿಸಿಕೊಂಡಿದ್ದರು. ಭಾರತ ವಿಕೆಟ್ ಕಳೆದು ಕೊಂಡು ಸಂಕಷ್ಟದಲ್ಲಿದ್ದಾಗ ಅತೀ ಹೆಚ್ಚು ಪಂದ್ಯಗಳನ್ನು ಅವರೇ ನಿಂತು ಗೆಲ್ಲಿಸಿಕೊಟ್ಟಿದ್ದರಿಂದ ವಾಲ್ ಎಂದೇ ಅವರನ್ನು ಸಂಬೋಧಿಸಲಾಗುತ್ತಿತ್ತು. ಎರಡು ಬಾರಿ ಮುನ್ನೂರು ರನ್ಗೂ ಹೆಚ್ಚಿನ ಜೊತೆಯಾಟ ಆಡಿದ ಏಕೈಕ ಆಟಗಾರ ಎಂಬ ಖ್ಯಾತಿ ಇವರ ಹೆಸರಿನಲ್ಲಿದೆ. ಸಚಿನ್ ತೆಡೂಲ್ಕರ್ ಜೊತೆಗೆ 331 ರನ್ ಮತ್ತು ಗಂಗೂಲಿ ಜೊತೆಗೆ 318 ರನ್ಗಳ ಜೊತೆಯಾಟ ಆಡಿದ್ದರು. ಇದು ಅತೀ ಹೆಚ್ಚು ಜೊತೆಯಾಟದ ಟಾಪ್ ನಾಲ್ಕರ ಪಟ್ಟಿಯಲ್ಲಿದೆ.
ರಾಹುಲ್ ದ್ರಾವಿಡ್ ಭಾರತ ತಂಡದಲ್ಲಿ 164 ಟೆಸ್ಟ್, 344 ಏಕದಿನ ಮತ್ತು ಒಂದು ಟಿ-20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ದ್ರಾವಿಡ್ 2012 ಮಾರ್ಚ್ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದರು. ಅವರು 48 ಅಂತಾರಾಷ್ಟ್ರೀಯ ಶತಕಗಳನ್ನು ಗಳಿಸಿದ್ದರು. ನವೆಂಬರ್ 2021 ರಲ್ಲಿ ದ್ರಾವಿಡ್ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕರಾದರು.
ತವರು ನೆಲದಲ್ಲಿ ಲಂಕಾ ವಿರುದ್ಧ 10ನೇ ಸರಣಿ ಗೆದ್ದ ಭಾರತ: ಗುರುವಾರ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಕುಲ್ದೀಪ್ ಯಾದವ್ ಕೈಚಳಕ ಮತ್ತು ಕೆಎಲ್ ರಾಹುಲ್ ಅರ್ಧ ಶತಕದ ನೆರವಿನಿಂದ ಭಾರತ 4 ವಿಕೆಟ್ಗಳಿಂದ ಗೆಲುವು ಸಾಧಿಸಿತು. ಭಾರತ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಮುನ್ನಡೆಯೊಂದಿಗೆ ತನ್ನ ತೆಕ್ಕೆಗೆ ತೆಗೆದು ಕೊಂಡಿತು. ಈ ಮೂಲಕ ತವರು ನೆಲದಲ್ಲಿ ಲಂಕಾ ವಿರುದ್ಧ ಹತ್ತನೇ ಸರಣಿ ವಶಪಡಿಸಿಕೊಂಡಿತು.
ಕುಲ್ ದೀಪ್ ಯಾದವ್ಗೆ 200 ನೇ ವಿಕೆಟ್: ಲೆಗ್ ಸ್ಪಿನ್ನರ್ ಕುಲ್ದೀಪ್ ಯಾದವ್ ನಿನ್ನೆ ನಡೆದ ಪಂದ್ಯದಲ್ಲಿ ಮೂರು ವಿಕೆಟ್ ಕಬಳಿಸಿದರು. ಈ ಮೂಲಕ ಅವರು ಅಂತಾರಾಷ್ಟ್ರೀಯ ಪಂದ್ಯದಲ್ಲಿ 200 ವಿಕೆಟ್ ಗಳಿಸಿದ ಮೈಲಿಗಲ್ಲನ್ನು ತಲುಪಿದ್ದಾರೆ. ಕೆಎಲ್ ರಾಹುಲ್ ನಿನ್ನೆ ತಮ್ಮ 50ನೇ ಏಕದಿನ ಪಂದ್ಯ ಆಡಿದ್ದು, ಅರ್ಧ ಶತಕ ದಾಖಲಿಸಿದ್ದಾರೆ.
ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ ನೆರವಾದರು. ಇಬ್ಬರೂ ಟಫ್ ಪಿಚ್ನಲ್ಲಿ ತಾಳ್ಮೆಯಿಂದ ಬ್ಯಾಟ್ ಬೀಸಿದರು. ಕೆಎಲ್ ರಾಹುಲ್ ಅಜೇಯ 64 ರನ್ ಗಳಿಸಿದರೆ, ಹಾರ್ದಿಕ್ 36 ರನ್ ಗಳಿಸಿದರು. ಚಮಿಕಾ ಕರುಣರತ್ನೆ ಮತ್ತು ಲಹಿರು ಕುಮಾರ ತಲಾ ಎರಡು ವಿಕೆಟ್ ಪಡೆದು ಭಾರತದ ರನ್ ಚೇಸ್ಗೆ ಕಡಿವಾಣ ಹಾಕಿದರು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಲಂಕಾಕ್ಕೆ ಕುಲ್ದೀಪ್ ಯಾದವ್ ಮತ್ತು ಸಿರಾಜ್ ಕಾಡಿದರು. ಇಬ್ಬರೂ ತಲಾ ಮೂರು ವಿಕೆಟ್ ಪಡೆದು ಸಿಂಹಳೀಯರನ್ನು 215ರನ್ಗೆ ಕಟ್ಟಿಹಾಕಿದರು. ನಿನ್ನೆ ಲಂಕಾ ಏಕದಿನ ಅಂತಾರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ನುವಾನಿಡು ಫೆರ್ನಾಂಡೋ ಅರ್ಧಶತಕ ಗಳಿಸಿ ಸಿಂಹಳೀಯರಿಗೆ ನೆರವಾದರು.
ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ಗೆಲುವಿನ ದಡ ಸೇರಿಸಿದ ರಾಹುಲ್: ಏಕದಿನ ಸರಣಿ ಭಾರತದ ಕೈವಶ