ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಆಟವನ್ನು ಫಿನಿಶ್ ಮಾಡುವ ಶೈಲಿ ವಿಸ್ಮಯಕಾರಿಯಾಗಿದೆ ಮತ್ತು ಅದನ್ನು ನೋಡಲು ನನಗೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಫೋಟಕ ಬ್ಯಾಟರ್ ಪೃಥ್ವಿ ಶಾ ಹೇಳಿದ್ದಾರೆ.
40 ವರ್ಷ ವಯಸ್ಸಿನ ಧೋನಿ ಭಾನುವಾರ ನಡೆದ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 6 ಎಸೆತಗಳಲ್ಲಿ 18 ರನ್ಗಳಿಸಿ ತಮ್ಮ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದಲ್ಲದೇ, ಐಪಿಎಲ್ ಇತಿಹಾಸದಲ್ಲಿ 9ನೇ ಬಾರಿಗೆ ಸಿಎಸ್ಕೆ ತಂಡವನ್ನು ಫೈನಲ್ಗೆ ಕೊಂಡೊಯ್ದರು.
ಕೊನೆಯ ಓವರ್ನಲ್ಲಿ ಸಿಎಸ್ಕೆ ಗೆಲ್ಲಲು 13 ರನ್ಗಳ ಅವಶ್ಯಕತೆಯಿತ್ತು. ಮೊದಲ ಎಸೆತದಲ್ಲಿ ಕರ್ರನ್, ಮೊಯಿನ್ ಅಲಿ ವಿಕೆಟ್ ಪಡೆದರು. 2ನೇ ಧೋನಿ ಎಸೆತದಲ್ಲಿ ಸ್ಕ್ವೇರ್ ಲೆಗ್ನಲ್ಲಿ ಬೌಂಡರಿ ಬಾರಿಸಿದರೆ, 3ನೇ ಎಸೆತ ಎಡ್ಜ್ ಆಗಿ ಕೀಪ್ ಹಿಂದೆ ಬೌಂಡರಿ ಗೆರೆ ದಾಡಿತು. 3ನೇ ಎಸೆತದಲ್ಲಿ ಫುಲ್ ಶಾಟ್ ಮೂಲಕ ಬೌಂಡರಿ ಬಾರಿಸಿ ಡೆಲ್ಲಿ ಕೈಯಲ್ಲಿದ್ದ ಪಂದ್ಯವನ್ನು ಕಸಿದುಕೊಂಡರು.
"ಎಂ ಎಸ್ ಧೋನಿ ತುಂಬಾ ವಿಭಿನ್ನ ವ್ಯಕ್ತಿ, ಅದು ಎಲ್ಲರಿಗೂ ಗೊತ್ತಿದೆ. ಅವರು ಪಂದ್ಯವನ್ನು ಫಿನಿಶಿಂಗ್ ಮಾಡುವುದನ್ನು ಅನೇಕ ಬಾರಿ ಮಾಡುವುದನ್ನು ನಾವು ನೋಡಿದ್ದೇವೆ. ಹಾಗೆಯೇ ನಮ್ಮ ವಿರುದ್ಧವೂ ಅದ್ಬುತವಾಗಿ ಆಡಿ ಪಂದ್ಯ ಕಸಿದುಕೊಂಡರು. ಅವರು ಬ್ಯಾಟಿಂಗ್ ಮಾಡುವಾಗ ಅತ್ಯಂತ ಅಪಾಯಕಾರಿ ಪ್ಲೇಯರ್. ನಾನು ಈ ವಾತಾವರಣದಲ್ಲಿ ಇರುವುದಕ್ಕೆ ತುಂಬಾ ಅದೃಷ್ಟಶಾಲಿಯಾಗಿದ್ದೇನೆ. ಏಕೆಂದರೆ ಅವರಂತಹ ಬ್ಯಾಟರ್ ಮತ್ತು ನಾಯಕನನ್ನು ನೋಡುವ ಅವಕಾಶ ಸಿಕ್ಕಿತು. ಅವರು ಇಂದು ನಮ್ಮಿಂದ ಪಂದ್ಯವನ್ನು ಕಿತ್ತುಕೊಂಡರು " ಎಂದು ಶಾ ಡೆಲ್ಲಿ ಫ್ರಾಂಚೈಸಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ್ದ ಡೆಲ್ಲಿ ತಂಡಕ್ಕೆ ಪೃಥ್ವಿ ಶಾ ಕೇವಲ 34 ಎಸೆತಗಳಲ್ಲಿ 60 ಮತ್ತು ಪಂತ್ (51) ಅವರ ಅರ್ಧಶತಕದ ನೆರವಿನಿಂದ 173 ರನ್ಗಳ ಗುರಿ ನೀಡಿತ್ತು. ಈ ಮೊತ್ತವನ್ನು ಸಿಎಸ್ಕೆ 19.4 ಓವರ್ಗಳಲ್ಲಿ ತಲುಪಿ ತಂಡವನ್ನು ಗೆಲುವಿನ ದಡ ಸೇರಿಸಿದರು.