ಲಂಡನ್: ಲಾರ್ಡ್ಸ್ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಶತಕ ಸಿಡಿಸಿ ಭಾರತದ ಗಂಗೂಲಿ ಹೆಸರಿನಲ್ಲಿದ್ದ ದಾಖಲೆ ಬ್ರೇಕ್ ಮಾಡಿದ್ದ ಕಿವೀಸ್ ಬ್ಯಾಟ್ಸ್ಮನ್ ಡಿವೋನ್ ಕಾನ್ವೆ, 2ನೇ ದಿನ 125 ವರ್ಷಗಳ ಹಿಂದಿನ ದಾಖಲೆಯೊಂದನ್ನು ಬ್ರೇಕ್ ಮಾಡಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಡಿವೋನ್ ಕಾನ್ವೆ ಅವರ 200 ರನ್ಗಳ ನೆರವಿನಿಂದ ಕಿವೀಸ್ ತಂಡ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 378 ರನ್ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.
ಇನ್ನು ಮೊದಲ ದಿನ ಅಜೇಯ 136 ರನ್ ಗಳಿಸುವ ಮೂಲಕ 25 ವರ್ಷಗಳ ಹಿಂದೆ ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ದಾಖಲೆ ಮುರಿದಿದ್ದ ಡಿವೋನ್ ಕಾನ್ವೆ, 2ನೇ ದಿನವಾದ ಗುರುವಾರ 200 ರನ್ ಗಳಿಸುವ ಮೂಲಕ ಇಂಗ್ಲೆಂಡ್ ನೆಲದಲ್ಲಿ ಪದಾರ್ಪಣೆ ಮಾಡಿ ಗರಿಷ್ಠ ರನ್ ಬಾರಿಸಿದ ದಾಖಲೆಗೆ ಪಾತ್ರರಾಗಿದ್ದಾರೆ. ಅಲ್ಲದೆ ಪದಾರ್ಪಣೆ ಪಂದ್ಯದಲ್ಲಿ ದ್ವಿಶತಕ ಸಿಡಿಸಿದ 7ನೇ ಬ್ಯಾಟ್ಸ್ಮನ್ ಎನಿಸಿಕೊಂಡರು.
1896ರಲ್ಲಿ ಇಂಗ್ಲೆಂಡ್ ತಂಡದ ಕೆ.ಎಸ್.ರಂಜೀತ್ ಸಿಂಗ್ಜಿ ಮ್ಯಾಚೆಸ್ಟರ್ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಜೇಯ 154 ರನ್ ಗಳಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಅದಕ್ಕೂ ಮುನ್ನ ಇಂಗ್ಲೆಂಡ್ನ ಗ್ರೇಸ್ ಆಸ್ಟ್ರೇಲಿಯಾ ವಿರುದ್ಧ ಪದಾರ್ಪಣೆ ಪಂದ್ಯದಲ್ಲಿ 180 ರನ್ ಗಳಿಸಿದ್ದರು.
2ನೇ ದಿನ ಬ್ಯಾಟಿಂಗ್ ಆರಂಭಿಸಿದ ಕಾನ್ವೆ ನಿಕೋಲ್ಸ್ ಜೊತೆಗೆ 4ನೇ ವಿಕೆಟ್ಗೆ 174 ರನ್ಗಳ ಜೊತೆಯಾಟ ನಡೆಸಿದರು. ನಿಕೋಲ್ಸ್ 61 ರನ್ ಗಳಿಸಿ ಔಟಾಗುತ್ತಿದ್ದಂತೆ ಕಿವೀಸ್ ದಿಢೀರ್ ಕುಸಿತ ಕಂಡಿತು. ಆದರೆ ಕೊನೆಯವರೆಗೂ ಏಕಾಂಗಿಯಾಗಿ ಆಂಗ್ಲರ ದಾಳಿಯನ್ನು ಹಿಮ್ಮೆಟ್ಟಿಸಿದ ಕಾನ್ವೆ, 347 ಎಸೆತಗಳಲ್ಲಿ 200 ರನ್ ಪೂರೈಸಿದರು. ಅವರ ಇನ್ನಿಂಗ್ಸ್ನಲ್ಲಿ 22 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿತ್ತು.
ಇಂಗ್ಲೆಂಡ್ ಪರ ಜೇಮ್ಸ್ ಆ್ಯಂಡರ್ಸನ್ 2, ಆಲ್ಲಿ ರಾಬಿನ್ಸನ್ 4 ಮತ್ತು ಮಾರ್ಕ್ವುಡ್ 3 ವಿಕೆಟ್ ಪಡೆದರು.
ಇನ್ನು ಮೊದಲ ಇನ್ನಿಂಗ್ಸ್ ಆರಂಭಿಸಿರುವ ಇಂಗ್ಲೆಂಡ್ 2 ವಿಕೆಟ್ ಕಳೆದುಕೊಂಡು 111 ರನ್ ಗಳಿಸಿದೆ. ಡೊಮೆನಿಕ್ ಸಿಬ್ಲೆ(0) ಮತ್ತು ಜಾಕ್ ಕ್ರಾಲೇ(2) ವಿಕೆಟ್ ಬೇಗ ಕಳೆದುಕೊಂಡರು. ನಾಯಕ ಜೋ ರೂಟ್ 42 ಮತ್ತು ಆರಂಭಿಕ ಬ್ಯಾಟ್ಸ್ಮನ್ ರೋನಿ ಬರ್ನ್ಸ್ 59 ರನ್ ಗಳಿಸಿ ಇಂಗ್ಲೆಂಡ್ ತಂಡಕ್ಕೆ ಚೇತರಿಕೆ ನೀಡಿದ್ದಾರೆ.
ಇದನ್ನು ಓದಿ: ಲಾರ್ಡ್ಸ್ ನೆಲದಲ್ಲಿದ್ದ ಗಂಗೂಲಿ ದಾಖಲೆ ಮುರಿದ ನ್ಯೂಜಿಲೆಂಡ್ ಕಾನ್ವೆ