ಮುಂಬೈ: ಕೋವಿಡ್ 19 ಭೀತಿ ಲೆಕ್ಕಿಸದೇ ಪಂಜಾಬ್ ಕಿಂಗ್ಸ್ ವಿರುದ್ಧ 9 ವಿಕೆಟ್ಗಳ ಜಯ ಸಾಧಿಸಿರುವ ರಿಷಭ್ ಪಂತ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶುಕ್ರವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕಣಕ್ಕಿಳಿಯುತ್ತಿದೆ. ಟೂರ್ನಿಯಲ್ಲಿ ತಲಾ 6 ಪಂದ್ಯಗಳನ್ನಾಡಿರುವ ರಾಜಸ್ಥಾನ್ ರಾಯಲ್ಸ್ 4 ಜಯ ಮತ್ತು ಡೆಲ್ಲಿ 3 ಜಯ ಸಾಧಿಸಿ ಕ್ರಮವಾಗಿ 3 ಮತ್ತು 6ನೇ ಸ್ಥಾನದಲ್ಲಿವೆ. ಉಭಯ ತಂಡಗಳು ಕಳೆದ ಪಂದ್ಯದಲ್ಲಿ ಗೆಲುವು ಸಾಧಿಸಿದ್ದು ಈ ಪಂದ್ಯ ಹೈವೋಲ್ಟೇಜ್ ಕ್ರೇಜ್ ಹುಟ್ಟುಹಾಕಿದೆ.
ಎರಡೂ ತಂಡಗಳಲ್ಲೂ ಸ್ಫೋಟಕ ಆಟಗಾರರ ದಂಡೇ ಇದೆ. ರಾಯಲ್ಸ್ ಪರ ಜಾಸ್ ಬಟ್ಲರ್, ಸಂಜು ಸಾಮ್ಸನ್, ಪಡಿಕ್ಕಲ್ ಅದ್ಭುತ ಫಾರ್ಮ್ನಲ್ಲಿದ್ದರೆ, ಇತ್ತ ಡೆಲ್ಲಿ ತಂಡದಲ್ಲಿ ಆರಂಭಿಕ ಬ್ಯಾಟರ್ಗಳಾದ ಪೃಥ್ವಿ ಶಾ, ಡೇವಿಡ್ ವಾರ್ನರ್ ಮತ್ತು ರಿಷಭ್ ಪಂತ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ಅದರಲ್ಲೂ ವಾರ್ನರ್-ಶಾ ಜೋಡಿ ಸತತ 4 ಪಂದ್ಯಗಳಲ್ಲಿ 50 ರನ್ಗಳ ಜೊತೆಯಾಟ ನಡೆಸಿ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಹಾಗಾಗಿ ಆರಂಭಿಕ ಕ್ರಮಾಂಕದಲ್ಲಿ ಸಮಬಲದ ಪೈಪೋಟಿ ನಿರೀಕ್ಷಿಸಬಹುದಾಗಿದೆ.
ರಾಜಸ್ಥಾನ್ ರಾಯಲ್ಸ್ಗೆ ಹೋಲಿಸಿದರೆ ತಂಡದ ಮಧ್ಯಮ ಕ್ರಮಾಂಕ ಅಷ್ಟೇನೂ ಬಲಿಷ್ಠವಾಗಿಲ್ಲ. ರೋವ್ಮನ್ ಪೋವೆಲ್ ಸಂಪೂರ್ಣ ವಿಫಲರಾದರೆ, ಲಲಿತ್ ಯಾದವ್ ಸರ್ಫರಾಜ್ ಖಾನ್ಗೆ ತಮ್ಮ ಸಾಮರ್ಥ್ಯ ಸಾಬೀತುಪಡಿಸಿಲು ಅವಕಾಶಗಳು ಸಿಕ್ಕಿಲ್ಲ. ಹಾಗಾಗಿ ನಾಳಿನ ಪಂದ್ಯ ಇವರಿಗೆ ಸೂಕ್ತ ವೇದಿಕೆಯಾಗಲಿದೆ. ಆದರೆ ರಾಯಲ್ಸ್ಗೆ ಹೆಟ್ಮಾಯರ್ ಮಧ್ಯಮ ಕ್ರಮಾಂಕದಲ್ಲಿ ಅಮೋಘ ಫಾರ್ಮ್ನಲ್ಲಿದ್ದು ತಂಡಕ್ಕೆ ನಿರ್ಣಾಯಕ ರನ್ ಗಳಿಸುತ್ತಿದ್ದಾರೆ. ಜೊತೆಗೆ ಅಶ್ವಿನ್ ಬ್ಯಾಟಿಂಗ್ನಲ್ಲಿ ನೆರವಾಗುತ್ತಿದ್ದಾರೆ. ಆದರೆ ಪರಾಗ್ ಮಾತ್ರ ಸಿಕ್ಕ ಅವಕಾಶಗಳನ್ನು ಇನ್ನೂ ಸದುಪಯೋಗಪಡಿಸಿಕೊಂಡಿಲ್ಲ.
ಬೌಲಿಂಗ್ ವಿಭಾಗದಲ್ಲಿ ಡೆಲ್ಲಿ ಮತ್ತು ರಾಯಲ್ಸ್ ಟೂರ್ನಿಯಲ್ಲೇ ಅತ್ಯುತ್ತಮ ದಾಳಿಯನ್ನು ಹೊಂದಿವೆ. ಪಂತ್ ಬಳಗದಲ್ಲಿ ಮುಸ್ತಾಫಿಜುರ್ ರಹಮಾನ್, ಶಾರ್ದುಲ್ ಠಾಕೂರ್, ಖಲೀಲ್ ಅಹ್ಮದ್‌ರಂತಹ ಮಾರಕ ವೇಗಿಗಳಿದ್ದಾರೆ. ಇತ್ತ ರಾಯಲ್ಸ್ ತಂಡದಲ್ಲಿ ವೇಗದ ಬೌಲಿಂಗ್ ಬೌಲ್ಟ್ ಬಿಟ್ಟರೆ ಉಳಿದ ಬೌಲರ್ಗಳು ಅಷ್ಟು ಮೊನಚು ಹೊಂದಿಲ್ಲ. ಆದರೆ ಸ್ಪಿನ್ ವಿಭಾಗದಲ್ಲಿ ಯುಜ್ವೇಂದ್ರ ಚಹಲ್ ಮತ್ತು ಅಶ್ವಿನ್ ಅಂತಹ ವಿಶ್ವಶ್ರೇಷ್ಠರಿದ್ದಾರೆ. ಹೆಚ್ಚು ಕಡಿಮೆ ಸರಿಸಮನಾದ ಬಳಗವನ್ನು ಹೊಂದಿರುವ ಈ ಎರಡು ತಂಡಗಳ ನಡುವಿನ ಪಂದ್ಯ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲಿದೆ.
ಮುಖಾಮುಖಿ: ಉಭಯ ತಂಡಗಳ ನಡುವೆ ಇದುವರೆಗೆ 24 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ತಲಾ 12 ಜಯ ಸಾಧಿಸಿವೆ. ಕಳೆದ ಋತುವಿನಲ್ಲಿ ಆಡಿದ ಎರಡು ಪಂದ್ಯಗಳಲ್ಲಿ ತಲಾ 1 ಪಂದ್ಯವನ್ನು ಗೆದ್ದಿವೆ.
ಇದನ್ನೂ ಓದಿ:ಪೃಥ್ವಿ ಶಾ ಭೀತಿ, ಸ್ವಾರ್ಥವಿಲ್ಲದ ಆಡುವ ಅಮೂಲ್ಯ ಆಟಗಾರ: ಸಂಜಯ್ ಮಂಜ್ರೇಕರ್