ಮುಂಬೈ: ಆಸ್ಟ್ರೇಲಿಯಾದ ಆಲ್ರೌಂಡರ್ ಮಿಚೆಲ್ ಮಾರ್ಷ್ಗೆ ಆ್ಯಂಟಿಜನ್ ಟೆಸ್ಟ್ ಪಾಸಿಟಿವ್ ಬಂದಿರುವುದರಿಂದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ತೊಡಕಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಆರ್‌ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವುದಿರಂದ ಐಪಿಎಲ್ ವೇಳಾ ಪಟ್ಟಿಯಂತೆ ನಡೆಯಲಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಪಾಸಿಟಿವ್ ಬಂದು ಐಸೊಲೇಷನ್ನಲ್ಲಿರುವ ಫಿಸಿಯೋಪ್ಯಾಟ್ರಿಕ್ ಫರ್ಹಾರ್ತ್ ಅವರನ್ನು ಬಿಟ್ಟು, ಡೆಲ್ಲಿ ಕ್ಯಾಪಿಟಲ್ಸ್ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಯ ಎಲ್ಲಾ ಇತರ ಆರ್‌ಟಿ-ಪಿಸಿಆರ್ ವರದಿಗಳು ನೆಗೆಟಿವ್ ಬಂದಿವೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದುಬಂದಿದೆ.
"ಮಿಚೆಲ್ ಮಾರ್ಷ್ ಆರ್‌ಟಿ-ಪಿಸಿಆರ್ ವರದಿ ನೆಗೆಟಿವ್ ಬಂದಿದೆ. ಆರ್‌ಟಿ-ಪಿಸಿಆರ್ ವರದಿಗಳು ನಿರ್ಣಾಯಕ ಸಾಕ್ಷ್ಯವಾಗಿವೆ ಮತ್ತು ತಂಡದ ಎಲ್ಲಾ ಆಟಗಾರರ ವರದಿಗಳು ಕೂಡ ನೆಗೆಟಿವ್ ಬಂದಿವೆ. ಆದ್ದರಿಂದ ಬುಧವಾರ ನಡೆಯಬೇಕಿರುವ ಡೆಲ್ಲಿ ಕ್ಯಾಪಿಟಲ್ಸ್ vs ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯಕ್ಕೆ ಯಾವುದೇ ಅಪಾಯವಿಲ್ಲ" ಎಂದು ಹಿರಿಯ ಬಿಸಿಸಿಐ ಅಧಿಕಾರಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.
ಪಾಕಿಸ್ತಾನ ಸರಣಿಯ ವೇಳೆ ಮಿಚೆಲ್ ಮಾರ್ಷ್ ಗಾಯಕ್ಕೆ ಒಳಗಾಗಿದ್ದರು. ಅವರು ಭಾರತಕ್ಕೆ ಆಗಮಿಸಿದ ನಂತರ ಫರ್ಹಾರ್ತ್ ಅವರ ಮಾರ್ಗದರ್ಶನದಲ್ಲಿ ರಿಹಾಬ್ಗೆ ಒಳಗಾಗಿದ್ದರು. ಈ ಕಾರಣದಿಂದ ಆ್ಯಂಟಿಜನ್ ಪರೀಕ್ಷೆಯಲ್ಲಿ ಪಾಸಿಟಿವ್ ಕಾಣಿಸಿಕೊಂಡಿರಬಹುದು ಎನ್ನಲಾಗಿದೆ.
ಮಾರ್ಷ್ಗೆ ಪಾಸಿಟಿವ್ ಬಂದಿದ್ದರಿಂದ ಸೋಮವಾರ ಪುಣೆಗೆ ತೆರಳಬೇಕಿದ್ದ ಡೆಲ್ಲಿ ತಂಡ ಪ್ರಯಾಣ ರದ್ದು ಮಾಡಿ ಹೋಟೆಲ್ನಲ್ಲೇ ಉಳಿದುಕೊಂಡಿತ್ತು. ಇದೀಗ ಎಲ್ಲರೂ ಆರ್‌ಟಿ-ಪಿಸಿಆರ್ ಟೆಸ್ಟ್ನಲ್ಲಿ ನೆಗೆಟಿವ್ ಪಡೆದುಕೊಂಡಿರುವುದರಿಂದ ಮಂಗಳವಾರ ಪುಣೆಗೆ ಇಡೀ ತಂಡ ಪ್ರಯಾಣಿಸಲಿದೆ ಎಂದು ಬಿಸಿಸಿಐ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಐಪಿಎಲ್ನಲ್ಲಿ ವೇಗವಾಗಿ 1000 ರನ್: ಕೊಹ್ಲಿ, ಧೋನಿ, ರೋಹಿತ್ ಹಿಂದಿಕ್ಕಿದ ಪಡಿಕ್ಕಲ್