ದುಬೈ: ಇಂಗ್ಲೆಂಡ್ ತಂಡದ ನಾಯಕ ಇಯಾನ್ ಮಾರ್ಗನ್ ಅವರೊಂದಿಗಿನ ವಿವಾದವನ್ನು ಭಾರತ ತಂಡದ ಆಫ್ - ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್ ಪಂದ್ಯದ ವೇಳೆ ಕೊನೆಗೊಳಿಸಲು ಪ್ರಯತ್ನಿಸಿದ್ದಾರೆ. ಅವರೊಂದಿಗೆ ಯಾವುದೇ ವೈಯಕ್ತಿಕ ಹೋರಾಟ ನಡೆಸಿಲ್ಲ, ಆದರೆ, ಆಟವನ್ನು ಹೇಗೆ ಆಡಬೇಕು ಎನ್ನುವುದರ ಬಗೆಗಿನ ಭಿನ್ನಾಭಿಪ್ರಾಯ ಎಂದು ಹೇಳಿದ್ದಾರೆ.
ಕಳೆದ ವಾರದ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪಂದ್ಯದ ವೇಳೆ ಬ್ಯಾಟರ್ ಆಗಿದ್ದ ರಿಷಭ್ ಪಂತ್ ದೇಹಕ್ಕೆ ಚೆಂಡು ಬಡಿದರೂ ಅಶ್ವಿನ್ ಮತ್ತೊಂದು ರನ್ ತೆಗೆದುಕೊಂಡಿದ್ದರು. ಇದನ್ನು ಖಂಡಿಸಿದ ಮಾರ್ಗನ್ ಅಶ್ವಿನ್ ವಿರುದ್ಧ ಕೋಪಗೊಂಡು, ಇದು ಕ್ರಿಕೆಟ್ ನಿಯಮಕ್ಕೆ ಅವಮಾನ ಮಾಡಿದಂತೆ ಮತ್ತು ಕ್ರೀಡಾಸ್ಪೂರ್ತಿಗೂ ಧಕ್ಕೆ ಮಾಡಿದ್ದಾರೆಂದು ಆರೋಪಿಸಿದ್ದರು. ಎಂಸಿಸಿ ನಿಯಮದ ಪ್ರಕಾರ ಚೆಂಡು ಥ್ರೋ ಮಾಡಿದ ವೇಳೆ ಫೀಲ್ಡರ್ ದೇಹಕ್ಕೆ ತಾಗಿದ ನಂತರ ರನ್ ತೆಗೆದುಕೊಳ್ಳುವ ಹಾಗಿಲ್ಲ.
ಆದರೆ, ಇಂಗ್ಲೆಂಡ್ 2019ರ ವಿಶ್ವಕಪ್ ಫೈನಲ್ನಲ್ಲಿ ಬೆನ್ ಸ್ಟೋಕ್ಸ್ ರನ್ ಓಡುವಾಗ ಫೀಲ್ಡರ್ ಥ್ರೋ ಮಾಡಿದ ಚೆಂಡು ಬ್ಯಾಟ್ಗೆ ತಗುಲಿ ಬೌಂಡರಿ ಸೇರಿತ್ತು. ಅಂಪೈರ್ ಇಂಗ್ಲೆಂಡ್ಗೆ 5 ರನ್ ಕೊಡುಗೆ ನೀಡಿತ್ತು. ಇದು ನ್ಯೂಜಿಲ್ಯಾಂಡ್ನ ವಿಶ್ವಕಪ್ ಕನಸನ್ನು ಭಗ್ನಗೊಳಿಸಿತ್ತು.
ಇದು ವೈಯುಕ್ತಿಕ ಯುದ್ಧ ಅಥವಾ ಹೋರಾಟ ಎಂದು ಭಾವಿಸಿಲ್ಲ
" ನೋಡಿ, ಇದು ಯಾರೊಂದಿಗೂ ನಡೆಸಿದ ವೈಯಕ್ತಿಕ ಯುದ್ದ ಅಥವಾ ಯಾವುದೇ ಒಂದು ಹೋರಾಟವಲ್ಲ ಎಂದು ನಾನು ಭಾವಿಸುತ್ತೇನೆ. ಗಮನ ಸೆಳೆಯಲು ಬಯಸುವ ಕೆಲವು ಜನರು ಆ ಘಟನೆಯನ್ನು ಆ ರೀತಿ ಬಿಂಬಿಸಿದರು. ನಾನು ಅದನ್ನು ಆ ರೀತಿ ನೋಡುತ್ತಿಲ್ಲ" ಎಂದು ಸಿಎಸ್ಕೆ ವಿರುದ್ಧದ ಪಂದ್ಯ ಮುಗಿದ ನಂತರ ಸ್ಪಷ್ಟಪಡಿಸಿದ್ದಾರೆ.
ಆ ಸಂದರ್ಭದಲ್ಲಿ ಚೆಂಡು ಪಂತ್ಗೆ ತಾಗಿದೆ ಎನ್ನುವುದು ನನ್ನ ಅರಿವಿಗೆ ಬರಲಿಲ್ಲ. ಹಾಗಾಗಿ ಎರಡನೇ ತೆಗೆದುಕೊಂಡೆ. ಆದರೆ, ಇದನ್ನು ನಾಚಿಗೇಡಿನ ಸಂಗತಿ, ಕ್ರೀಡಾ ಸ್ಪೂರ್ತಿಗೆ ಧಕ್ಕೆ ಎಂದೆಲ್ಲ ಪದ ಪ್ರಯೋಗ ಮಾಡಿದರು. ಈ ಕಾರಣಕ್ಕಾಗಿ ನಾನು ಅವರು ಬಳಸಿದ ಪದಗಳು ಸರಿಯಾದ ದಿಕ್ಕು ಮತ್ತು ಸರಿಯಾದ ಜಾಗದಲ್ಲಿಲ್ಲ ಎಂದು ನಾನು ಹೇಳಲು ಮುಂದಾದೆ ಎಂದು ಅಶ್ವಿನ್ ವಿವರಿಸಿದ್ದಾರೆ.
ಅಶ್ವಿನ್ ಆ ಪಂದ್ಯದಲ್ಲಿ ಔಟಾದ ನಂತರ ಸೌಥಿ, ಮೋಸ ಮಾಡಿದರೆ ಹೀಗೆ ಆಗುವುದು ಎಂದು ಕಮೆಂಟ್ ಮಾಡಿದ್ದರು. ಇದರಿಂದ ಕೋಪಗೊಂಡ ಅಶ್ವಿನ್ ಮಾರ್ಗನ್ ಮತ್ತು ಸೌಥಿ ವಿರುದ್ಧ ತಿರುಗಿ ಬಿದ್ದಿದ್ದರು. ಈ ಘಟನೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಕೆಕೆಆರ್ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಮಧ್ಯ ಪ್ರವೇಶಿಸಿ ಜಗಳವನ್ನು ನಿಯಂತ್ರಿಸಿದ್ದರು.
ಇದನ್ನೂ ಓದಿ:ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ಲೇ ಆಫ್ ಪ್ರವೇಶಿಸುವ ಅವಕಾಶ ಇನ್ನೂ ಇದೆ!