ಅಬುಧಾಬಿ : ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್ನಲ್ಲಿ 200 ಪಂದ್ಯಗಳನ್ನ ಮುನ್ನಡೆಸಿದ ಮೊದಲ ನಾಯಕ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು ಮುನ್ನಡೆಸುವ ಮೂಲಕ ಧೋನಿ ಈ ವಿಶೇಷ ಮೈಲುಗಲ್ಲನ್ನು ಸ್ಥಾಪಿಸಿದರು. ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 186 ಪಂದ್ಯಗಳಲ್ಲಿ ಮುನ್ನಡೆಸಿದ್ದರೆ, ರೈಸಿಂಗ್ ಪುಣೆ ಸೂಪರ್ಜೇಂಟ್ಸ್ ತಂಡವನ್ನು 14 ಪಂದ್ಯಗಳಲ್ಲಿ ಮುನ್ನಡೆಸಿದ್ದರು.
ಐಪಿಎಲ್ನಲ್ಲಿ ಅತ್ಯಂತ ಯಶಸ್ವಿ ನಾಯಕ ಎನಿಸಿರುವ ಧೋನಿ 3 ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ಇವರ ನಾಯಕತ್ವದಲ್ಲಿ ಸಿಎಸ್ಕೆ 12 ಆವೃತ್ತಿಗಳಲ್ಲಿ ದಾಖಲೆಯ 11 ಬಾರಿ ಪ್ಲೇ ಆಫ್ ತಲುಪಿದೆ. ಅಲ್ಲದೆ 2021ರ ಆವೃತ್ತಿಯಲ್ಲೂ ಪ್ಲೇ ಆಫ್ ಪ್ರವೇಶಿಸಿದ ಮೊದಲ ತಂಡ ಎನಿಸಿದೆ.
ಧೋನಿಯನ್ನು ಹೊರತುಪಡಿಸಿದರೆ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿ 136, ಗೌತಮ್ ಗಂಭೀರ್ 129, ರೋಹಿತ್ ಶರ್ಮಾ 127 ಮಾತ್ರ 100ಕ್ಕಿಂತ ಹೆಚ್ಚಿನ ಪಂದ್ಯಗಳಲ್ಲಿ ನಾಯಕನಾಗಿದ್ದಾರೆ. ಈ ಪಂದ್ಯ ಹೊರತುಪಡಿಸಿ ಧೋನಿ ಮುನ್ನಡೆಸಿರುವ 199 ಪಂದ್ಯಗಳಲ್ಲಿ 119 ಜಯ ಮತ್ತು 79 ಸೋಲು ಕಂಡಿವೆ.
ಒಂದು ಪಂದ್ಯ ಫಲಿತಾಂಶವಿಲ್ಲದೆ ಕೊನೆಗಂಡಿದೆ. ನಾಯಕನಾಗಿ ಧೋನಿ ಶೇ.60ರಷ್ಟು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದಾರೆ. ಇವರ ನಂತರ ರೋಹಿತ್ ಶರ್ಮಾ(59.5) ಸಚಿನ್ ತೆಂಡೂಲ್ಕರ್(58.8) ಮತ್ತು ಶೇನ್ ವಾರ್ನ್(55.4) ಗೆಲುವಿನ ಸರಾಸರಿ ಹೊಂದಿದ್ದಾರೆ.
ಇದನ್ನು ಓದಿ:IPLನಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದ ಯಂಗ್ ಪ್ಲೇಯರ್ ಗಾಯಕ್ವಾಡ್