ಮೆಲ್ಬೋರ್ನ್: ಭಾರತದಲ್ಲಿ 2ನೇ ಹಂತದ ಕೋವಿಡ್-19 ತೀವ್ರವಾಗಿರುವುದರಿಂದ ಆಸ್ಟ್ರೇಲಿಯಾ ತನ್ನ ದೇಶದಿಂದ ಭಾರತಕ್ಕೆ ಹೋಗುವ ಎಲ್ಲಾ ವಿಮಾನಗಳನ್ನು ಬಂದ್ ಮಾಡಿದೆ. ಹಾಗಾಗಿ ಐಪಿಎಲ್ನಲ್ಲಿ ಭಾಗವಹಿಸಿರುವ ಕ್ರಿಕೆಟಿಗರು ವಾಪಸ್ ಆಸ್ಟ್ರೇಲಿಯಾಕ್ಕೆ ಮರಳುವ ವ್ಯವಸ್ಥೆಯನ್ನು ಅವರೇ ಮಾಡಿಕೊಳ್ಳಬೇಕೆಂದು ಪ್ರಧಾನಿ ಸ್ಕಾಟ್ ಮಾರಿಸನ್ ಮಂಗಳವಾರ ತಿಳಿಸಿದ್ದಾರೆ.
ಕೋವಿಡ್-19 ಸಾಂಕ್ರಾಮಿಕದ ಕಾರಣ ಆಸ್ಟ್ರೇಲಿಯಾ ಮಂಗಳವಾರದಿಂದ ಭಾರತದಿಂದ ಬರುವ ಎಲ್ಲ ಪ್ಯಾಸೆಂಜರ್ ವಿಮಾನಗಳನ್ನು ಮೇ 15ವರೆಗೆ ನಿಷೇಧಿಸಿದೆ.
"ಅವರು (ಕ್ರಿಕೆಟಿಗರು) ಅಲ್ಲಿಗೆ ಫ್ರಾಂಚೈಸಿ ಲೀಗ್‌ನಲ್ಲಿ ಆಡುವ ಸಲುವಾಗಿ ಖಾಸಗಿ ಪ್ರಯಾಣದ ವ್ಯವಸ್ಥೆಯೊಂದಿಗೆ ತೆರಳಿದ್ದಾರೆ. ಇದು ಆಸ್ಟ್ರೇಲಿಯಾ ತಂಡದ ಭಾರತದ ಪ್ರವಾಸದ ಭಾಗವಾಗಿರಲಿಲ್ಲ. ಅವರೆಲ್ಲರೂ ತಮ್ಮ ಸ್ವಂತ ಸಂಪನ್ಮೂಲಗಳ ಅಡಿಯಲ್ಲಿದ್ದಾರೆ ಹಾಗೂ ಆ ಸಂಪನ್ಮೂಲಗಳನ್ನು ಉಪಯೋಗಿಸುತ್ತಿದ್ದಾರೆ. ಆದ್ದರಿಂದ ಟೂರ್ನಿ ಮುಗಿದ ಬಳಿಕವೂ ತಮ್ಮದೇ ವ್ಯವಸ್ಥೆಗಳೊಂದಿಗೆ ಆಸ್ಟ್ರೇಲಿಯಾಗೆ ಮರಳಲಿದ್ದಾರೆಂದು ನನಗೆ ಖಾತ್ರಿಯಿದೆ." ಎಂದು ಮಾರಿಸನ್ ಹೇಳಿದ್ದಾರೆ.
ಈಗಾಗಲೆ ರಾಜಸ್ಥಾನ್ ರಾಯಲ್ಸ್ ತಂಡದ ಆಂಡ್ರ್ಯೂ ಟೈ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಪಿನ್ನರ್ ಆ್ಯಡಂ ಜಂಪಾ ಹಾಗೂ ವೇಗಿ ಕೇನ್ ರಿಚರ್ಡ್‌ಸನ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ನಂತರ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಕ್ರಿಸ್ ಲಿನ್ ಟೂರ್ನಿ ಮುಗಿದ ಮೇಲೆ ತಮ್ಮ ಚಾರ್ಟರ್ಡ್ ಫ್ಲೈಟ್ ಮೂಲಕ್ ಕರೆಸಿಕೊಳ್ಳಬೇಕೆಂದು ಕ್ರಿಕೆಟ್ ಆಸ್ಟ್ರೇಲಿಯಾಗೆ ಮನವಿ ಮಾಡಿದ್ದರು.
ಆದರೆ ಆಸ್ಟ್ರೇಲಿಯಾ ಸ್ಟಾರ್ ಆಟಗಾರರಾದ ಸ್ಟೀವನ್ ಸ್ಮಿತ್ (ಡೆಲ್ಲಿ ಕ್ಯಾಪಿಟಲ್ಸ್), ಡೇವಿಡ್ ವಾರ್ನರ್ (ಹೈದರಾಬಾದ್), ಗ್ಲೆನ್ ಮ್ಯಾಕ್ಸ್‌ವೆಲ್ (ಆರ್‌ಸಿಬಿ), ಪ್ಯಾಟ್ ಕಮಿನ್ಸ್ (ಕೋಲ್ಕತ್ತಾ), ನೇಥನ್ ಕೌಲ್ಟರ್ ನೈಲ್ (ಮುಂಬೈ) ಸೇರಿದಂತೆ ಇತರೆ 14 ಆಟಗಾರರು ಮತ್ತು ಆಸ್ಟ್ರೇಲಿಯಾ ಮಾಜಿ ಆಟಗಾರರಾದ ರಿಕಿ ಪಾಂಟಿಂಗ್, ಡೇವಿಡ್ ಹಾಗೂ ಮೈಕ್ ಹಸ್ಸಿ, ಜೇಮ್ಸ್ ಹೋಪ್ಸ್ ಕೋಚ್ಗಳಾಗಿ ಕಾರ್ಯವನ್ನು ಮುಂದುವರಿಸುತ್ತಿದ್ದಾರೆ.