ಕೋಲ್ಕತ್ತಾ: ಟೀಂ ಇಂಡಿಯಾದ ಮಾಜಿ ಆಟಗಾರ ಮನೋಜ್ ತಿವಾರಿ ಪಶ್ಚಿಮ ಬಂಗಾಳದ ಕ್ರೀಡಾ ಸಚಿವರಾಗಿ ನಿನ್ನೆ ಪ್ರತಿಜ್ಞೆ ಸ್ವೀಕರಿಸಿದ್ದಾರೆ.
ಮೇ 5ರಂದು ಬಂಗಾಳದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಮಮತಾ ಬ್ಯಾನರ್ಜಿ ಮೇ 10ಕ್ಕೆ ಸಂಪುಟ ವಿಸ್ತರಿಸಿದ್ದರು. ಇದರಲ್ಲಿ ಒಟ್ಟು 43 ಸಚಿವರು ಮತ್ತು 19 ರಾಜ್ಯ ಸಚಿವರಿದ್ದು, ಅಧಿಕಾರ ವಹಿಸಿಕೊಂಡಿರುವವರಲ್ಲಿ ಮಾಜಿ ಕ್ರಿಕೆಟಿಗ ತಿವಾರಿಯೂ ಒಬ್ಬರು.
ಬಲಗೈ ಬ್ಯಾಟ್ಸ್‌ಮನ್ ಹಾಗೂ ಬಲಗೈ ಸ್ಪಿನ್ನರ್ ಆಗಿರುವ 35ರ ಹರೆಯದ ಮನೋಜ್ ತಿವಾರಿ ಬಂಗಾಳ ತಂಡದ ಪರ ದೇಶಿಯ ಕ್ರಿಕೆಟ್ ಆಡುತ್ತಿದ್ದರು. ಇವರು ಟೀಂ ಇಂಡಿಯಾ ಪರ 12 ಏಕದಿನ ಪಂದ್ಯ ಹಾಗೂ 3 ಟಿ-20 ಪಂದ್ಯಗಳನ್ನಾಡಿದ್ದಾರೆ. 12 ಏಕದಿನ ಪಂದ್ಯಗಳಿಂದ 281 ರನ್ಗಳಿಸಿದ್ದು, 3 ವಿಕೆಟ್ ಪಡೆದಿದ್ದಾರೆ. ಮೂರು ಟಿ-20 ಪಂದ್ಯಗಳಿಂದ 15 ರನ್ ಗಳಿಸಿದ್ದಾರೆ.
ಐಪಿಎಲ್ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರೈಸಿಂಗ್ ಪುಣೆ ತಂಡಗಳ ಪರ ಆಡಿದ್ದಾರೆ. ಒಟ್ಟು 98 ಪಂದ್ಯಗಳನ್ನಾಡಿದ್ದು, 1,695 ರನ್ಗಳಿಸಿದ್ದಾರೆ.
ಇದನ್ನೂ ಓದಿ: ಪ. ಬಂಗಾಳ ಚುನಾವಣೆ : ಟಿಎಂಸಿ ಅಭ್ಯರ್ಥಿ ಕ್ರಿಕೆಟಿಗ ಮನೋಜ್ ತಿವಾರಿ ಭರ್ಜರಿ ಜಯ
ಪ.ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ತಿವಾರಿಗೆ ಟಿಕೆಟ್ ನೀಡಿತ್ತು. ಇದು ಅವರ ಮೊದಲ ಚುನಾವಣೆಯೂ ಆಗಿತ್ತು. ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಮೇಲೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದ ತಿವಾರಿ, ನಂತರ ಫೆಬ್ರವರಿ 20, 2020ರಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಗ್ರೇಟರ್ ಕೋಲ್ಕತ್ತಾ ಪ್ರಾಂತ್ಯದ ಹೌರಾ ಜಿಲ್ಲೆಯ ಶಿಬ್ಪುರ್ ಕ್ಷೇತ್ರದಲ್ಲಿ ಕಣಕ್ಕಿಳಿದು, ಬಿಜೆಪಿಯ ರತಿನ್ ಚಕ್ರಬೊರ್ತಿ ವಿರುದ್ಧ 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಪಡೆದಿದ್ದರು.