ಚೆನ್ನೈ (ತಮಿಳುನಾಡು): ವಿಶ್ವಕಪ್ನ ಭಾರತದ ಮೊದಲ ಪಂದ್ಯದಲ್ಲಿ 6 ವಿಕೆಟ್ನ ಸ್ವಾರಸ್ಯಕರ ಗೆಲುವನ್ನು ಪಡೆದುಕೊಂಡಿತು. ಪಂದ್ಯದ ವೇಳೆ ಆಸ್ಟ್ರೇಲಿಯನ್ ಅಭಿಮಾನಿಗಳು ಭಾರತದ ಪಿಚ್ನ್ನು ಹಳಿದರು. ಅವರಿಗೆ ಬೇಕಾದ ರೀತಿಯ ಪಿಚ್ಗಳನ್ನು ಮಾಡಿ ಪಂದ್ಯಗಳನ್ನು ಆಡಿಸುತ್ತಿದ್ದಾರೆ ಎಂಬುದು ಕಾಂಗರೂ ಪಡೆಯ ಬೆಂಬಲಿಗರ ಆರೋಪವಾಗಿತ್ತು. ಆದರೆ ಆಸ್ಟ್ರೇಲಿಯಾದ ಆಟಗಾರರು ಟೀಮ್ ಇಂಡಿಯಾದ ಪ್ರದರ್ಶನಕ್ಕೆ ಮೆಚ್ಚುಗೆ ಸಲ್ಲಿಸಿದ್ದಾರೆ.
ಆಸ್ಟ್ರೇಲಿಯಾವನ್ನು ಚೆನ್ನೈನಲ್ಲಿ ಭಾರತದ ತ್ರಿವಳಿ ಸ್ಪಿನ್ ದಾಳಿ ಕಾಡಿತು. ಅದರಲ್ಲೂ ರವೀಂದ್ರ ಜಡೇಜಾ ಹಾಗೂ ಕುಲ್ದೀಪ್ ಯಾದವ್ ಸ್ಪಿನ್ಗೆ ಆಸಿಸ್ನ ಪ್ರಮುಖ ವಿಕೆಟ್ಗಳು ಪತನವಾದವು. ಇದರಿಂದ ಆಸ್ಟ್ರೇಲಿಯಾ 49.3 ಓವರ್ನಲ್ಲಿ 199ಕ್ಕೆ ಆಲ್ ಔಟ್ ಆಯಿತು. 200 ರನ್ನ ಗುರಿಯನ್ನು ಟೀಮ್ ಇಂಡಿಯಾ ನಿಧಾನ ಗತಿಯಲ್ಲೇ ವಿರಾಟ್ ಕೊಹ್ಲಿ ಮತ್ತು ಕೆ ಎಲ್ ರಾಹುಲ್ ಅವರ ಬ್ಯಾಟಿಂಗ್ ಆಧಾರದಿಂದ ಗೆದ್ದುಕೊಂಡಿತು.
"ಟೀಮ್ ಇಂಡಿಯಾದ ಎಲ್ಲಾ ಸ್ಪಿನ್ನರ್‌ಗಳು ನಿಜವಾಗಿಯೂ ಸೊಗಸಾಗಿ ಬೌಲಿಂಗ್ ಮಾಡಿದರು. ನಿಸ್ಸಂಶಯವಾಗಿ ಅವರಿಗೆ ಸರಿಹೊಂದುವ ವಿಕೆಟ್ ಕೂಡ ಇತ್ತು. ಅವರೆಲ್ಲರೂ ಉತ್ತಮ ಗುಣಮಟ್ಟದ ಸ್ಪಿನ್ನರ್‌ಗಳಾಗಿರುವುದರಿಂದ ಅವರ ಬಾಲ್ಗೆ ಬ್ಯಾಟ್ ಮಾಡುವುದು ಸವಾಲಾಗಿತ್ತು. ಅವರು ಚೆನ್ನಾಗಿ ಬೌಲಿಂಗ್ನ್ನು ನಿಭಾಯಿಸಿದರು. ನಮಗೆ ಪಂದ್ಯದನ್ನು ಕಮ್ಬ್ಯಾಕ್ ಮಾಡಲು ಸಾಧ್ಯವಾಗಲಿಲ್ಲ" ಎಂದು ಸ್ಟೀವ್ ಸ್ಮಿತ್ ಹೇಳಿದರು.
ಪಂದ್ಯದಲ್ಲಿ ಸ್ಮಿತ್ ಮತ್ತು ಅನುಭವಿ ವಾರ್ನರ್ ಮಾತ್ರ 40 ಗಡಿ ದಾಟಿ ಬ್ಯಾಟಿಂಗ್ ಮಾಡಿದರು. ಈ ಇಬ್ಬರು ಅರ್ಧಶತಕದ ಜೊತೆಯಾಟ ಮಾಡಿದರು. ಸ್ಮಿತ್ 46 ರನ್ ಗಳಿಸಿದರೆ, ವಾರ್ನರ್ 41 ರನ್ ಕಲೆಹಾಕಿದ್ದರು. ಇವರ ರನ್ ಸಹಾಯದಿಂದ 199 ರನ್ ಗುರಿ ನೀಡಲು ಸಾಧ್ಯವಾಯಿತು. ಇಬ್ಬರು ಅನುಭವಿಗಳು ಭಾರತೀಯ ಸ್ಪಿನ್ನರ್ಗಳನ್ನು ತಾಳ್ಮೆಯಿಂದ ಎದುರಿಸಿದರೂ, ಜಡೇಜಾ, ಕುಲ್ದೀಪ್ ಸ್ಪಿನ್ಗೆ ವಿಕೆಟ್ ಒಪ್ಪಿಸಿದರು.
ಸ್ಮಿತ್ ಕೂಡ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ವಿರಾಟ್ ಮತ್ತು ರಾಹುಲ್ ಉತ್ತಮವಾಗಿ ಆಡಿದರು. ಕೊಹ್ಲಿ ಅವರ ಕ್ಯಾಚ್ ಕೈತಪ್ಪಿದ್ದು ದುರಾದೃಷ್ಟ. ವಿರಾಟ್ ಮತ್ತು ರಾಹುಲ್ ಸಾಕಷ್ಟು ಶಾಂತತೆಯಿಂದ ಆಡಿದರು. ಅವರು ನಿಜವಾಗಿಯೂ ಸ್ಮಾರ್ಟ್ ಕ್ರಿಕೆಟ್ ಆಡಿದರು. ಕೇವಲ 200 ಅನ್ನು ಬೆನ್ನಟ್ಟುತ್ತಿದ್ದರಿಂದ ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಆದರೆ ಮೂರು ವಿಕೆಟ್ ಪತನದ ನಂತರವೂ ಅವರು ಕಟ್ಟಿದ ಇನ್ನಿಂಗ್ಸ್ ಮೆಚ್ಚುವಂತಹದ್ದು" ಎಂದಿದ್ದಾರೆ.
ಚೆಪಾಕ್ ವಿಕೆಟ್ನ್ನು ಒಂದು ಟ್ರಿಕಿ ವಿಕೆಟ್ ಎಂದು ಸ್ಮಿತ್ ವ್ಯಾಖ್ಯಾನಿಸಿದರು. "ಇದು ಸವಾಲಿನ ವಿಕೆಟ್ ಆಗಿತ್ತು ಮತ್ತು ಸೀಮ್ ಬೌಲರ್‌ಗಳಿಗೆ ಸ್ವಿಂಗ್ ಆಗುತ್ತಿತ್ತು. ಜೊತೆಗೆ ಸ್ಪಿನ್ ಬೌಲರ್ಗಳು ಇಲ್ಲಿ ಯಶಸ್ವಿ ಆಗುವುದನ್ನು ನಾವು ನೋಡಿದ್ದೇವೆ. ನಿಸ್ಸಂಶಯವಾಗಿ ವಿಕೆಟ್ ಕಷ್ಟಕರವಾಗಿತ್ತು. 200 ರನ್ ಸ್ವಲ್ಪ ಕಡಿಮೆ ಮೊತ್ತ, 250 ಗುರಿ ಪಿಚ್ಗೆ ಸ್ಪರ್ಧಾತ್ಮಕವಾಗಿತ್ತು. ಸಂಜೆಯ ವೇಳೆಗೆ ಮಂಜು ಬಿದ್ದದ್ದು ಬ್ಯಾಟಿಂಗ್ಗೆ ಸ್ವಲ್ಪ ಸಹಾಯ ಮಾಡಿದೆ. ಆದರೆ ನಾವು ನಾಲ್ಕನೇ ವಿಕೆಟ್ ಬೇಗ ಪಡೆದಿದ್ದರೆ ಉತ್ತಮವಾಗಿತ್ತು" ಎಂದು ಟಾಸ್ ಗೆದ್ದು ಬ್ಯಾಟಿಂಗ್ ಮೊದಲು ಮಾಡಿದ್ದು ಸೋಲಿಗೆ ಇನ್ನೊಂದು ಕಾರಣ ಎಂಬಂತೆ ಹೇಳಿದರು.
ಮುಂದಿನ ಪಂದ್ಯದ ಬಗ್ಗೆ ಮಾತನಾಡಿದ ಸ್ಮಿತ್, ದಕ್ಷಿಣ ಆಫ್ರಿಕಾ ದೆಹಲಿ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿ ಬೃಹತ್ ಮೊತ್ತವನ್ನು ಕಲೆಹಾಕಿದೆ. ಲಕ್ನೋದ ಪಿಚ್ ಹೇಗೆ ವರ್ತಿಸುತ್ತದೆ ಎಂಬುದರ ಬಗ್ಗೆ ಕುತೂಹಲವಿದೆ. ಪಂದ್ಯದ ವೇಳೆಗೆ ಮಾರ್ಕಸ್ ಸ್ಟೋಯ್ನಿಸ್ ಚೇತರಿಸಿಕೊಂಡರೆ ತಂಡಕ್ಕೆ ಮರಳುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: Cricket World Cup: ಡಚ್ಚರ ವಿರುದ್ಧ ಗೆಲುವಿಗಾಗಿ ಕಾತರದಿಂದ ಕಾಯುತ್ತಿರುವ ನ್ಯೂಜಿಲೆಂಡ್