ಹೈದರಾಬಾದ್: ಗಾಯದ ಹಿನ್ನೆಲೆಯಲ್ಲಿ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದ ಆಲ್ರೌಂಡರ್ ವಿಜಯ್ ಶಂಕರ್ ಸ್ಥಾನಕ್ಕೆ ಕನ್ನಡಿಗ ಮಯಾಂಕ್ ಅಗರ್ವಾಲ್ ತಂಡವನ್ನು ಸೇರಿಕೊಂಡಿದ್ದಾರೆ. ಆದರೆ, ಮಯಾಂಕ್ ಅಗರವಾಲ್ ಆಯ್ಕೆ ಬಗ್ಗೆ ಮಾಜಿ ಆಟಗಾರರಿಂದ ಪ್ರಶ್ನೆ ಮೂಡಿದೆ.
ಆಲ್ರೌಂಡರ್ ವಿಜಯ್ ಶಂಕರ್ ಸ್ಥಾನಕ್ಕೆ ಆರಂಭಿಕ ಆಟಗಾರ ಅಗರವಾಲ್ ಸಮಂಜಸವೇ ಎಂಬ ಮಾತು ಕೇಳಿಬಂದಿದೆ. ಅಲ್ಲದೆ ಈ ಹಿಂದೆ ಧವನ್ ಗಾಯಾಳುವಾದಾಗ ರಿಷಭ್ ಪಂತ್ ಟೀಂಗೆ ಸೇರ್ಪಡೆಯಾಗಿದ್ದರು. ಇವರಿಬ್ಬರ ಆಯ್ಕೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಆಟಗಾರ ಮೊಹಮದ್ ಕೈಫ್, ಈ ಇಬ್ಬರೂ ಆಟಗಾರರೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹೊಸಬರು. ಪಂತ್ ಕೆಲವೇ ಪಂದ್ಯಗಳನ್ನು ಆಡಿದ್ದರೆ, ಮಯಾಂಕ್ ಇನ್ನೂ ಕೂಡ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ ಈ ಇಬ್ಬರೂ ಆಟಗಾರರು ನಿರಂತರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಕಾಣಿಸಿಕೊಂಡವರಲ್ಲ. ಇದೀಗ ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪಂದ್ಯಕ್ಕೂ ಮುನ್ನ ಸಾಕಷ್ಟು ಅಭ್ಯಾಸ ನಡೆಸಿದ್ದರೂ ಕೂಡ ಅಲ್ಲಿನ ಪರಿಸ್ಥಿತಿಗೆ ತಕ್ಕಂತೆ ಹಾಗೂ ಒತ್ತಡ ನಿಭಾಯಿಸುವುದು ಬಹಳ ಮುಖ್ಯ ಎಂಬುದು ಕೈಫ್ ಮಾತಾಗಿದೆ.
ಇನ್ನು ಇಂಗ್ಲೆಂಡ್ ವಿರುದ್ಧ 338 ರನ್ ಟಾರ್ಗೆಟ್ ತಲುಪುವುದು ಸುಲಭವಲ್ಲ. ಕ್ರಿಕೆಟ್ನಲ್ಲಿ ಯಾವುದಾದರೊಂದು ತಂಡ ಸೋಲಲೇಬೇಕು. ವಿಶ್ವಕಪ್ನಲ್ಲಿ ಈ ಹಿಂದಿನ ಪಂದ್ಯಗಳಲ್ಲೂ ಅನೇಕ ತಂಡಗಳು ರನ್ ಬೆನ್ನತ್ತುವಾಗ ಎಡವಿರುವುದನ್ನು ನಾವು ನೋಡಬಹುದು ಎಂದಿದ್ದಾರೆ.