ಲಂಡನ್: ಕಳೆದ ವಾರ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಎಡಗಾಲಿನ ಹ್ಯಾಮ್ಸ್ಟ್ರಿಂಗ್ಗೆ ತುತ್ತಾಗಿ ಭಾರತ ತಂಡದ ಆತಂಕಕ್ಕೆ ಕಾರಣವಾಗಿದ್ದ ಭುವನೇಶ್ವರ್ ಕುಮಾರ್ ಗುಣ ಮುಖರಾಗಿದ್ದು ತಂಡಕ್ಕೆ ಕಂಬ್ಯಾಕ್ ಮಾಡಲು ಕಾಯುತ್ತಿದ್ದಾರೆ.
ಭುವಿ ಗಾಯದ ಸಮಸ್ಯೆಯಿಂದ ಆಡುವ ಹನ್ನೊಂದರ ಬಳಗದಲ್ಲಿ ವೇಗಿ ಮೊಹಮ್ಮದ್ ಶಮಿಗೆ ಅವಕಾಶ ನೀಡಲಾಯಿತು. ಆಡಿದ ಮೊದಲ ಪಂದ್ಯದಲ್ಲೇ ಅದ್ಭುತ ಪ್ರದರ್ಶನ ತೋರಿದ್ದ ಶಮಿ, 4 ವಿಕೆಟ್ ಪಡೆದು ಟೀಂ ಇಂಡಿಯಾ ಗೆಲುವಿಗೆ ಕಾರಣರಾಗಿದ್ದರು. ನಿನ್ನೆ ನಡೆದ ಪಂದ್ಯದಲ್ಲೂ ಪ್ರಮುಖ 4 ವಿಕೆಟ್ ಪಡೆದ ಶಮಿ, 2 ಪಂದ್ಯದಿಂದ 8 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಭುವಿ ಗಾಯದ ಸಮಸ್ಯೆಯಿಂದ ಆತಂಕ ಗೊಂಡಿದ್ದ ಟೀಂ ಇಂಡಿಯಾ, ಶಮಿ ಅದ್ಭುತ ಪ್ರದರ್ಶನದಿಂದ ನಿರಾಳವಾಗಿತ್ತು. ಆದರೆ, ತಂಡಕ್ಕೆ ಈಗ ಮತ್ತೊಂದು ಸಂಕಟ ಶುರುವಾಗಿದೆ.
ಭುವನೇಶ್ವರ್ ಸಂಪೂರ್ಣವಾಗಿ ಫಿಟ್ ಆಗಿದ್ದು,ತಂಡಕ್ಕೆ ವಾಪಾಸ್ ಆಗಲು ಕಾಯುತಿದ್ದಾರೆ. ಇತ್ತ ಭುವಿ ತಂಡಕ್ಕೆ ಬಂದರೆ ಶಮಿ ಬೆಂಚ್ ಕಾಯಬೇಕು. ಇಂಗ್ಲೆಂಡ್ ವಿರುದ್ಧದ ಪಂದ್ಯಕ್ಕೆ ಸ್ವಿಂಗ್ ಸ್ಟಾರ್ ಮತ್ತು ಸ್ಪೀಡ್ ಸ್ಟಾರ್ಗಳಲ್ಲಿ ಟೀಂ ಇಂಡಿಯಾ ಯಾರಿಗೆ ಮಣೆ ಹಾಕುತ್ತೆ ಕಾದು ನೋಡಬೇಕು.