ಹೈದರಾಬಾದ್: ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತೀಯ ಕ್ರೀಡಾಪಟುಗಳು 2012ರ ಲಂಡನ್ ಒಲಿಂಪಿಕ್ಸ್ಗಿಂತಲೂ ಹೆಚ್ಚು ಪದಕಗಳನ್ನು ಗೆಲ್ಲುವ ಸಾಮರ್ಥ್ಯವಿದೆ ಎಂದು ಭಾರತ ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಪಿಚಂದ್ ಭವಿಷ್ಯ ನುಡಿದಿದ್ದಾರೆ.
ಜುಲೈ 23ರಿಂದ ಆರಂಭವಾಗಲಿರುವ ಟೋಕಿಯೋ ಗೇಮ್ಸ್ನಲ್ಲಿ ಭಾರತದಿಂದ ಈ ಬಾರಿ ದಾಖಲೆಯ 120 ಅಥ್ಲೀಟ್ಗಳು ಒಲಿಂಪಿಕ್ಸ್ನಲ್ಲಿ ಭಾಗವಹಿಸುತ್ತಿದ್ದಾರೆ. ಮಾಜಿ ಆಲ್ ಇಂಗ್ಲೆಂಡ್ ಚಾಂಪಿಯನ್ ಪ್ರಕಾರ ಭಾರತ ಈ ಬಾರಿ ಪದಕ ಪಟ್ಟಿಯಲ್ಲಿ ಎರಡಂಕಿ ದಾಟಲಿದೆ ಎಂದು ತಿಳಿಸಿದ್ದಾರೆ.
ಟೋಕಿಯೋ ಗೇಮ್ಸ್ನಲ್ಲಿ ನಾವು ಹೆಚ್ಚು ಕ್ರೀಡಾಪಟುಗಳನ್ನು ಹೊಂದಿದ್ದೇವೆ. ಆಶಾದಾಯಕವಾಗಿ ಲಂಡನ್ ಒಲಿಂಪಿಕ್ಸ್ನಲ್ಲಿ ಗೆದ್ದಿದ್ದ ಗರಿಷ್ಠ 6 ಪದಕಗಳ ದಾಖಲೆಯನ್ನು ನಾವು ಈ ಬಾರಿ ಮುರಿಯಬಹುದು. ಅಲ್ಲದೆ ಪದಕ ಪಟ್ಟಿಯಲ್ಲಿ ಎರಡಂಕಿ ದಾಟುವುದನ್ನು ನಿರೀಕ್ಷೆ ಮಾಡಬಹುದು ಎಂದು ಗೋಪಿಚಂದ್ ಪಿಟಿಐಗೆ ತಿಳಿಸಿದ್ದಾರೆ.
ಏಕೆಂದರೆ ಅಥ್ಲೀಟ್ಗಳಿಗೆ ಸರ್ಕಾರದಿಂದ ಸಾಕಷ್ಟು ಬೆಂಬಲ ಮತ್ತು ನೆರವು ದೊರೆತಿದೆ. ನಾನು ಅದು ಬೆಂಬಲ ಹೇಗೆದೆ ಎಂದು ಸ್ವತಃ ನೋಡಿದ್ದೇನೆ. ಹೆಚ್ಚಿನ ಪದಕಗಳನ್ನು ಗೆಲ್ಲುವುದು ಕ್ರೀಡೆಗಳಿಗೆ ಸಂಬಂಧಿಸಿದ ಜನರ ಕೈಗಳನ್ನು ಬಲಪಡಿಸುತ್ತದೆ ಎಂದು ನಾನು ಭಾವಿಸುತ್ತೇನೆ.
ಶೂಟಿಂಗ್, ಬಾಕ್ಸಿಂಗ್, ಕುಸ್ತಿಯಲ್ಲಿ ಭಾಗವಹಿಸುವವರು ಮತ್ತು ವೆಯ್ಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿಗೆ ಪದಕ ಗೆಲ್ಲುವ ಅವಕಾಶ ಹೆಚ್ಚಿದೆ. ಬ್ಯಾಡ್ಮಿಂಟನ್ನಲ್ಲಿ ಪಿವಿ ಸಿಂಧು ಟೂರ್ನಿಯಲ್ಲಿನ ಪದಕ ಗೆಲ್ಲುವ ನೆಚ್ಚಿನ ಆಟಗಾರರಲ್ಲಿ ಒಬ್ಬರು ಎಂದು ಗೋಪಿಚಂದ್ ಹೇಳಿದ್ದಾರೆ.
ಇದನ್ನೂ ಓದಿ: ಅಸಾಧ್ಯವಾದುದನ್ನು ಸಾಧಿಸಿ ಟೋಕಿಯೋಗೆ ಪ್ರಯಾಣ ಬೆಳೆಸಿದ ಆಟೋ ಚಾಲಕನ ಮಗಳು ದೀಪಿಕಾ!