ನವದೆಹಲಿ: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಧೋನಿಗೆ ಸೇನೆಯ ‘ಬಲಿದಾನ’ದ ಲಾಂಛನವಿರುವ ಗ್ಲೌಸ್ ಧರಿಸೋದಕ್ಕೆ ಅನುಮತಿ ನೀಡಲು ಐಸಿಸಿ ನಿರಾಕರಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ವೇಳೆ ಧೋನಿ ಧರಿಸಿದ್ದ ಪ್ಯಾರಾ ಸ್ಪೆಷಲ್ ಫೋರ್ಸ್ನ ‘ಬಲಿದಾನ’ ಲಾಂಛನವಿರುವ ಗ್ಲೌಸ್ ತೆಗದುಹಾಕುವಂತೆ ಐಸಿಸಿ ಸೂಚನೆ ನೀಡಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಬಿಸಿಸಿಐ ಕೂಡ ಧೋನಿ ಪರ ನಿಂತಿತ್ತು. ಧೋನಿ ಪ್ಯಾರಾಮಿಲಿಟರಿ ರೆಜಿಮೆಂಟಲ್ ಲಾಂಛನವಿರುವ ಗ್ಲೌಸ್ ಧರಿಸಿಲ್ಲ. ಹೀಗಾಗಿ ಇದು ಯಾವುದೇ ಕಾರಣಕ್ಕೂ ಐಸಿಸಿಯ ನಿಯಮ ಉಲ್ಲಂಘನೆ ಆಗುವುದಿಲ್ಲ. ಈ ಕುರಿತಂತೆ ಐಸಿಸಿಗೆ ಮನವರಿಕೆ ಮಾಡಿದ್ದೇವೆ ಎಂದು ನಿರ್ವಾಹಕ ಸಮಿತಿಯ ಮುಖ್ಯಸ್ಥ ವಿನೋದ್ ರೈ ಹೇಳಿದ್ದರು.
ಟ್ವಿಟರ್ನಲ್ಲಿ ಧೋನಿ ಬೆಂಬಲಿಸಿದ ದೇಶದ ಜನತೆ...! ಮಾಹಿಗೆ ಬಿಸಿಸಿಐ ಫುಲ್ ಸಫೋರ್ಟ್
ಆದರೆ, ಈ ಬಗ್ಗೆ ತನ್ನ ಪಟ್ಟು ಸಡಿಲಿಸದ ಐಸಿಸಿ, ಬಲಿದಾನ್ ಲಾಂಛನವಿರುವ ಗ್ಲೌಸ್ ಧರಿಸೋದಕ್ಕೆ ಅನುಮತಿ ನೀಡಲು ನಿರಾಕರಿಸಿದೆ. ಐಸಿಸಿಯ ಉಡುಪು ಮತ್ತು ಸಲಕರಣೆ ನಿಯಮ ಜಿ1ರ ಅನ್ವಯ, ಯಾವುದೇ ಆಟಗಾರ ಪಂದ್ಯದ ವೇಳೆ ಯಾವುದೇ ರೀತಿಯ ವೈಯಕ್ತಿಕ ಸಂದೇಶವನ್ನು ರವಾನಿಸುವಂಥ ಬ್ಯಾಂಡ್ ಅಥವಾ ಧಿರಿಸು ಧರಿಸುವಂತಿಲ್ಲ. ಹೀಗಾಗಿ ಅನುಮತಿ ನೀಡಲು ಐಸಿಸಿ ನಿರಾಕರಿಸಿದೆ.
'ಬಲಿದಾನ್' ಬ್ಯಾಡ್ಜ್ ಭಾರತದ ಪ್ರತಿಷ್ಠೆ: ಧೋನಿ ಪರ ಕೇಂದ್ರ ಸಚಿವರ ಬ್ಯಾಟ್
ಐಸಿಸಿ ನಡೆಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಕೋಟ್ಯಂತರ ನಾಗರಿಕರು, ರಾಜಕಾರಣಿಗಳು, ಸಿನಿ ಕಲಾವಿದರು ಕೂಡ ಧೋನಿ ಬೆಂಬಲಕ್ಕೆ ನಿಂತಿದ್ದರು. ಆದ್ರೆ, ಐಸಿಸಿ ಮತ್ತೆ ಅನುಮತಿ ನೀಡಲು ನಿರಾಕರಿಸಿದ್ದು, ಬಿಸಿಸಿಐ ಯಾವ ನಿರ್ಧಾರ ತೆಗೆದುಕೊಳ್ಳಲಿದೆ? ಎಂದು ಕೋಟ್ಯಂತರ ಕಣ್ಣುಗಳು ಕಾತರದಿಂದ ಕಾಯುತ್ತಿವೆ.