ದುಬೈ : ಟೀಂ ಇಂಡಿಯಾ ಟಿ-20 ವಿಶ್ವಕಪ್ ಗೆಲ್ಲುವ ಎಲ್ಲ ಪ್ರತಿಭೆ ಹೊಂದಿದೆ. ಟ್ರೋಫಿ ಎತ್ತಿ ಹಿಡಿಯಲು ಸ್ವಲ್ಪ ಪ್ರಬುದ್ಧತೆ ತೋರಿಸಬೇಕು ಎಂದು ಬಿಸಿಸಿಐ ಅಧ್ಯಕ್ಷ ಹಾಗೂ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಅಭಿಪ್ರಾಯಪಟ್ಟಿದ್ದಾರೆ.
ಅಕ್ಟೋಬರ್ 17ರಿಂದ ಐಸಿಸಿ ಟಿ-20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ. ಟೀಂ ಇಂಡಿಯಾ ಅಕ್ಟೋಬರ್ 24 ರಂದು ಸಾಂಪ್ರದಾಯಿಕ ಎದುರಾಳಿ ಪಾಕ್ ವಿರುದ್ಧ ಸೆಣಸಾಟ ನಡೆಸುವ ಮೂಲಕ ತನ್ನ ಅಭಿಯಾನ ಆರಂಭ ಮಾಡಲಿದೆ.
ಸುಲಭವಾಗಿ ಚಾಂಪಿಯನ್ ಆಗಲು ಸಾಧ್ಯವಿಲ್ಲ. ಕೇವಲ ಟೂರ್ನಾಮೆಂಟ್ನಲ್ಲಿ ಭಾಗಿ ಆಗುವುದರಿಂದಲೂ ಚಾಂಪಿಯನ್ ಆಗಲ್ಲ. ಈ ಪ್ರಕ್ರಿಯೆಯಲ್ಲಿ ಪ್ರಬುದ್ಧತೆ ತೋರಿಸಬೇಕು ಎಂದು ಗಂಗೂಲಿ ತಿಳಿಸಿದ್ದಾರೆ.
ಟೀಂ ಇಂಡಿಯಾ ಬಳಿ ಪ್ರತಿಭೆ ಇದೆ ಎಂದ ದಾದಾ
ವಿಶ್ವಕಪ್ಗಾಗಿ ಆಯ್ಕೆಯಾಗಿರುವ ಟೀಂ ಇಂಡಿಯಾ ಪ್ಲೇಯರ್ಸ್ ಬಳಿ ಪ್ರತಿಭೆ ಇದೆ. ರನ್ ಹಾಗೂ ವಿಕೆಟ್ ಪಡೆದುಕೊಳ್ಳುವ ಕೌಶಲ್ಯ ಹೊಂದಿದ್ದಾರೆ. ಆದರೆ, ಮಾನಸಿಕವಾಗಿ ಸದೃಢವಾಗಿರುವುದು ಅವಶ್ಯವಾಗಿದೆ ಎಂದು ಮಾಜಿ ಎಡಗೈ ಬ್ಯಾಟರ್ ತಿಳಿಸಿದರು.
ನೇರವಾಗಿ ಪ್ರಶಸ್ತಿ ಗುರಿಯಾಗಿಸುವ ಬದಲು ಪ್ರತಿ ಪಂದ್ಯ ಗೆಲ್ಲುವತ್ತ ಗಮನ ಹರಿಸಬೇಕು ಎಂದಿರುವ ದಾದಾ, ಭಾರತ ಯಾವುದೇ ತಂಡದ ವಿರುದ್ಧ ಆಡುವಾಗ ಸ್ಪರ್ಧಿಗಳಾಗಿರುತ್ತಾರೆ. ಫಲಿತಾಂಶಕ್ಕಿಂತಲೂ ಪ್ರಕ್ರಿಯೆ ಮೇಲೆ ಹೆಚ್ಚಿನ ಕೇಂದ್ರೀಕರಣ ಅಗತ್ಯವಾಗಿದೆ ಎಂದರು.
ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯ ವೀಕ್ಷಣೆ ಮಾಡಲು ದುಬೈಗೆ ಆಗಮಿಸಿದ್ದ ಬಿಸಿಸಿಐ ಅಧ್ಯಕ್ಷ ಗಂಗೂಲಿ, ತದ ನಂತರ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರು ಅನೇಕ ವಿಚಾರಗಳ ಬಗ್ಗೆ ತಮ್ಮ ಮನದಾಳ ಹಂಚಿಕೊಂಡರು.
ನಾನು ಮೊದಲ ಬಾರಿಗೆ 1991ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಾಗ ಡ್ರೆಸ್ಸಿಂಗ್ ರೂಂನಲ್ಲಿ ಕಪಿಲ್ ದೇವ್, ಸಚಿನ್ ಹಾಗೂ ಅಜರುದ್ದೀನ್ರಂತಹ ದಿಗ್ಗಜ ಆಟಗಾರರನ್ನ ನೋಡಿದೆ. ಹಾಗಾಗಿ, ಮೊದಲ ಪ್ರವಾಸ ಯಾವಾಗಲೂ ವಿಶೇಷವಾಗಿತ್ತು ಎಂದಿದ್ದಾರೆ.