ಇಂಗ್ಲೆಂಡ್: 2019ರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಲ್ಲಿಯವರೆಗೆ ಸೋಲು ಕಾಣದ ನ್ಯೂಜಿಲೆಂಡ್ ಮತ್ತು ಭಾರತ ತಂಡಗಳು ನಾಟಿಂಗ್ಹ್ಯಾಮ್ನಲ್ಲಿ ಮುಖಾಮುಖಿಯಾಗುತ್ತಿವೆ.
ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ತಂಡದ ವಿರುದ್ಧ ಜಯಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಕಿವೀಸ್ ಪಡೆ ಅಗ್ರಸ್ಥಾನದಲ್ಲಿದೆ. ಇತ್ತ ಭಾರತ ತಂಡ ಕೂಡ ಆಡಿರುವ ಎರಡೂ ಪಂದ್ಯಗಳಲ್ಲಿ ಜಯಗಳಿಸಿದ್ದು, ಇಂದಿನ ಪಂದ್ಯವನ್ನ ಗೆಲ್ಲುವ ವಿಶ್ವಾಸದಲ್ಲಿದೆ.
ಏಕದಿನ ಪಂದ್ಯದಲ್ಲಿ ಭಾರತದ್ದೇ ಮೇಲುಗೈ:
ಇದುವರೆಗೂ ಭಾರತ ಮತ್ತು ನ್ಯೂಜಿಲೆಂಡ್ ತಂಡ 106 ಬಾರಿ ಮುಖಾಮುಖಿಯಾಗಿದ್ದು, ಟೀಂ ಇಂಡಿಯಾ 55 ಪಂದ್ಯಗಳಲ್ಲಿ ಜಯಗಳಿಸಿದ್ದು, ಕಿವೀಸ್ 45 ಪಂದ್ಯಗಳಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯ ಡ್ರಾನಲ್ಲಿ ಅಂತ್ಯಕಂಡರೆ 5 ಪಂದ್ಯಗಳು ಯಾವುದೇ ಫಲಿತಾಂಶ ಕಂಡಿಲ್ಲ.
ವಿಶ್ವಕಪ್ನಲ್ಲಿ ನ್ಯೂಜಿಲ್ಯಾಂಡ್ ಮುಂದು:
ಇತ್ತ ಇದುವರೆಗಿನ ವಿಶ್ವಕಪ್ ಟೂರ್ನಿಗಳ ಇತಿಹಾಸ ನೋಡುವುದಾದ್ರೆ, ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಏಳು ಬಾರಿ ಮುಖಾಮುಖಿಯಾಗಿವೆ. ಏಳು ಪಂದ್ಯಗಳಲ್ಲಿ ಕಿವೀಸ್ ನಾಲ್ಕು ಪಂದ್ಯ ಗೆದ್ದಿದ್ದು, ಭಾರತ ಮೂರು ಪಂದ್ಯಗಳಲ್ಲಿ ಜಯಗಳಿಸಿದೆ. 2003ರ ವಿಶ್ವಕಪ್ನಲ್ಲಿ ಜಹೀರ್ ಖಾನ್ ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ ಜಯಗಳಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ನಡೆದ 2007, 2011, 2015ರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ಕಿವೀಸ್ ಒಮ್ಮೆಯೂ ಮುಖಾಮುಖಿಯಾಗಿಲ್ಲ.
ಮೂರಕ್ಕೆ ಮೂರು ಪಂದ್ಯದಲ್ಲಿ ಗೆಲುವು ಸಾಧಿಸಿರುವ ನ್ಯೂಜಿಲ್ಯಾಂಡ್ ತಂಡ, ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವನ್ನೂ ಸೋಲಿಸಿತ್ತು, ಹೀಗಾಗಿ ಆತ್ಮವಿಶ್ವಾಸದಿಂದ ಬೀಗುತ್ತಿರುವ ಕಿವೀಸ್ ಇಂದಿನ ಪಂದ್ಯದಲ್ಲೂ ಭಾರತವನ್ನ ಮಣಿಸುವ ವಿಶ್ವಾಸದಲ್ಲಿದೆ.
ಇತ್ತ ಬಲಿಷ್ಠ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳ ವಿರುದ್ಧ ಜಯ ದಾಖಲಿಸಿರುವ ಟೀಂ ಇಂಡಿಯಾ ಆಟಗಾರರು, ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಇಂದಿನ ಪಂದ್ಯದಲ್ಲೂ ಅದೇ ರೀತಿ ಸಾಂಘಿಕ ಪ್ರದರ್ಶನ ನೀಡಿದ್ರೆ ಕಿವೀಸ್ ತಂಡವನ್ನ ಮಣಿಸೋದು ಕಷ್ಟವೇನಲ್ಲ.