ಕಾರ್ಡಿಫ್: ವಿಶ್ವಕಪ್ ಕ್ರಿಕೆಟ್‌ನ ಮೂರನೇ ಪಂದ್ಯದಲ್ಲಿ ಶ್ರೀಲಂಕಾ ನೀಡಿದ್ದ 137 ರನ್ಗಳ ಗುರಿಯನ್ನು ಸುಲಭವಾಗಿ ತಲುಪುವ ಮೂಲಕ ನ್ಯೂಜಿಲೆಂಡ್ ಗೆಲುವಿನ ಕೇಕೆ ಹಾಕಿದೆ.
ಸೊಫಿಯಾ ಗಾರ್ಡನ್ಸ್ನಲ್ಲಿ ನಡೆದ ಪಂದ್ಯದಲ್ಲಿ ಕಿವೀಸ್ನ ಮಾರ್ಟಿನ್ ಗಪ್ಟಿಲ್ ಹಾಗೂ ಮನ್ರೊ ಹೆಬ್ಬಂಡೆಯಂತೆ ನಿಂತು ತಂಡದ ಗೆಲುವಿಗೆ ಕಾರಣರಾದರು. ಗಪ್ಟಿಲ್ 2 ಸಿಕ್ಸರ್ ಹಾಗೂ 8 ಬೌಂಡರಿ ಬಾರಿಸಿ 73 ರನ್ ಗಳಿಸಿದರೆ, ಮನ್ರೊ ಒಂದು ಸಿಕ್ಸರ್ ಹಾಗೂ 6 ಬೌಂಡರಿ ಬಾರಿಸಿ 58 ರನ್ ಕಲೆ ಹಾಕಿದರು. ಇಬ್ಬರ ಅಮೋಘ ಜೊತೆಯಾಟದಿಂದ 16.1 ಓವರ್ನಲ್ಲಿಯೇ ಕಿವೀಸ್ ಪಡೆ 10 ವಿಕೆಟ್ಗಳ ಜಯ ಸಾಧಿಸಿತು.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದ ನ್ಯೂಜಿಲೆಂಡ್ಗೆ, ಬೌಲಿಂಗ್‌ನಲ್ಲಿ ಲೂಕಿ ಫರ್ಗ್ಯುಸನ್ ಹಾಗೂ ಮ್ಯಾಟ್ ಹೆನ್ರಿ, ಲಂಕಾಪಡೆಯ ತಲಾ ಮೂರು ವಿಕೆಟ್ಗಳನ್ನು ಕಿತ್ತು ಬಲ ತುಂಬಿದರು. ಟ್ರೆಂಟ್ ಬೌಲ್ಟ್, ಕಾಲಿನ್ ಡಿ ಗ್ರ್ಯಾಂಡ್ಹೋಮ್, ಜೇಮ್ಸ್ ನಿಶಾಮ್, ಮಿಷಲ್ ಸ್ಯಾಂಟ್ನರ್ ತಲಾ ಒಂದು ವಿಕೆಟ್ ಕಬಳಿಸಿ ಲಂಕಾ ತಂಡಕ್ಕೆ ಆಘಾತ ನೀಡಿದರು.
ಲಂಕಾ ನಾಯಕ ದಿಮುತ ಕರುಣಾರತ್ನೆ 84 ಬಾಲ್‌ಗಳಿಗೆ 52 ರನ್ ಗಳಿಸಿದ್ದು ಬಿಟ್ಟರೆ, ಮತ್ಯಾರೂ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಮಾಡಲಿಲ್ಲ. ಕುಶಾಲ್ ಪರೇರ ಹಾಗೂ ತಿಸಾರ ಪೆರೇರಾ ಕ್ರಮವಾಗಿ 29 , 27 ರನ್ ಗಳಿಸಿದರು. ವಿಶೇಷ ಅಂದ್ರೆ, 8 ಮಂದಿ ಲಂಕಾ ಬ್ಯಾಟ್ಸ್ಮನ್ಗಳು ಒಂದಂಕಿ ಗಳಿಸಿ ವಾಪಸ್ಸಾಗುವಂತಾಯ್ತು. 29.2 ಓವರ್ಗಳಲ್ಲಿ ಲಂಕೆ ಕೇವಲ 136 ರನ್ ಗಳಿಸಿ ಆಲ್ಔಟ್ ಆಯ್ತು.