ಮುಂಬೈ: ಟೀಂ ಇಂಡಿಯಾದ ಉದಯೋನ್ಮುಖ ಆಟಗಾರ ಸಂಜು ಸ್ಯಾಮ್ಸನ್ ದಾಖಲೆಯ ದ್ವಿಶತಕ ಸಿಡಿಸಿದ ಕೆಲವೇ ದಿನಗಳಲ್ಲಿ ವಿಜಯ್ ಹಜಾರೆ ಟೂರ್ನಿಯಲ್ಲಿ ಮತ್ತೊಂದು ದ್ವಿಶತಕ ಮೂಡಿಬಂದಿದೆ. ವಿಶೇಷವೆಂದರೆ ಈ ದ್ವಿಶತಕದ ಮೂಲಕ ಬ್ಯಾಟಿಂಗ್ ದೈತ್ಯ ಕ್ರಿಸ್ ಗೇಲ್ ಹಾಗೂ ಹಿಟ್ಮ್ಯಾನ್ ರೋಹಿತ್ ಶರ್ಮಾ ದಾಖಲೆ ಪುಡಿಯಾಗಿದೆ.
ಮುಂಬೈ-ಜಾರ್ಖಂಡ್ ನಡುವಿನ ಪಂದ್ಯದಲ್ಲಿ ಮುಂಬೈ ತಂಡದ ಆರಂಭಿಕ ಯಶಸ್ವಿ ಜೈಸ್ವಾಲ್ 154 ಎಸೆತದಲ್ಲಿ ಆಕರ್ಷಕ 203 ರನ್ ದಾಖಲಿಸುವ ಮೂಲಕ ಲಿಸ್ಟ್ ಎ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಅತ್ಯಂತ ಕಿರಿಯ ಆಟಗಾರ ಎನ್ನುವ ಕೀರ್ತಿಗೆ ಭಾಜನರಾಗಿದ್ದಾರೆ.
ವಯಸ್ಸು 17 ವರ್ಷ 292 ದಿನದ ಯಶಸ್ವಿಯ ದ್ವಿಶತಕ ಇನ್ನಿಂಗ್ಸ್ನಲ್ಲಿ 12 ಸಿಕ್ಸರ್ ಹಾಗೂ 17 ಬೌಂಡರಿಗಳಿದ್ದವು. ಯಶಸ್ವಿ ಜೈಸ್ವಾಲ್ ಲಿಸ್ಟ್ ಎ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಏಳನೇ ಭಾರತೀಯ. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ರೋಹಿತ್ ಶರ್ಮಾ(ಮೂರು ಬಾರಿ), ಶಿಖರ್ ಧವನ್, ಕೆ.ವಿ.ಕೌಶಾಲ್ ಹಾಗೂ ಸಂಜು ಸ್ಯಾಮ್ಸನ್ ಲಿಸ್ಟ್ ಎ ಕ್ರಿಕೆಟ್ನಲ್ಲಿ ದ್ವಿಶತಕ ಸಿಡಿಸಿದ ಇತರೆ ಬ್ಯಾಟ್ಸ್ಮನ್ಗಳಾಗಿದ್ದಾರೆ.
ಯಶಸ್ವಿ ಜೈಸ್ವಾಲ್ ಅದ್ಭುತ ಆಟದ ಪರಿಣಾಮ ಮುಂಬೈ ನಿಗದಿತ 50 ಓವರ್ನಲ್ಲಿ 3 ವಿಕೆಟ್ ನಷ್ಟಕ್ಕೆ 358 ರನ್ ಕಲೆಹಾಕಿದೆ.