ಢಾಕಾ(ಬಾಂಗ್ಲಾದೇಶ): ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸದ ಅಂಗವಾಗಿ ಢಾಕಾದಲ್ಲಿ ನಡೆಯಬೇಕಿದ್ದ ಏಷ್ಯಾ ಇಲೆವೆನ್ ಮತ್ತು ವರ್ಲ್ಡ್ ಇಲೆವೆನ್ ನಡುವಿನ ಟಿ-20 ಪಂದ್ಯಗಳನ್ನು ಕೊರೊನಾ ವೈರಸ್ ಭೀತಿಯಿಂದ ಮುಂದೂಡಲಾಗಿದೆ.
ಮಾರ್ಚ್ 21 ಮತ್ತು 22 ರಂದು ನಡೆಯಬೇಕಿದ್ದ ಎರಡು ಪಂದ್ಯಗಳನ್ನು ಆಯೋಜಿಸುವಲ್ಲಿ ಕ್ರಿಕೆಟ್ ಮಂಡಳಿಯು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜ್ಮುಲ್ ಹಸನ್ ತಿಳಿಸಿದ್ದಾರೆ.
ಇತ್ತ ಕ್ರಿಕೆಟ್ ಪಂದ್ಯಗಳಿಗೂ ಮುನ್ನ ಮಾರ್ಚ್ 18 ರಂದು ಎ.ಆರ್.ರೆಹಮಾನ್ ಅವರ ಸಂಗೀತ ಕಾರ್ಯಕ್ರಮ ಕೂಡ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮವನ್ನು ಸಣ್ಣ ಪ್ರಮಾಣದಲ್ಲಿ ಮಾಡಲು ಯೋಜಿಸಿದ್ದೆವು. ಆದರೆ ಅದನ್ನು ಭವ್ಯವಾಗಿ ಮಾಡಲು ನಿರ್ಧರಿಸಿದ್ದೇವೆ. ಅದಕ್ಕಾಗಿಯೇ ಈ ಕಾರ್ಯಕ್ರಮವನ್ನು ಸದ್ಯಕ್ಕೆ ಮುಂದೂಡಲು ತೀರ್ಮಾನಿಸಿದ್ದೇವೆ ಎಂದಿದ್ದಾರೆ.
ಮಾರ್ಚ್ 21 ಮತ್ತು 22 ರಂದು ಟಿ-20 ಪಂದ್ಯಗಳನ್ನು ಆಯೋಜಿಸುವಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಆಟಗಾರರು ಇಲ್ಲಿಗೆ ಬಂದು ಆಡುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ ಸದ್ಯಕ್ಕೆ ಸಂಗೀತ ಕಾರ್ಯಕ್ರಮ ಮತ್ತು ಟಿ 20 ಪಂದ್ಯಗಳನ್ನು ಮುಂದೂಡಿದ್ದೇವೆ. ಮುಂದಿನ ಎರಡು ತಿಂಗಳುಗಳಲ್ಲಿ ಪರಿಸ್ಥಿತಿಯನ್ನು ನೋಡಿಕೊಂಡು ಮತ್ತೆ ಆಯೋಜನೆ ಮಾಡುವುದಾಗಿ ತಿಳಿಸಿದ್ದಾರೆ.
ದಕ್ಷಿಣ ಏಷ್ಯಾದ ದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕು ಕಾಣಿಸಿಕೊಂಡವರ ಸಂಖ್ಯೆ ಹೆಚ್ಚಾಗುತ್ತಿದೆ. ಭಾನುವಾರ ಬಾಂಗ್ಲಾದಲ್ಲಿ ಮೂರು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇನ್ನಿಬ್ಬರಿಗೆ ತಗುಲಿರುವ ಶಂಕೆ ವ್ಯಕ್ತವಾಗಿದೆ.