ಲಂಡನ್: ಸಾಲು ಸಾಲು ಸೋಲಿನಿಂದ ಕಂಗೆಟ್ಟ ಪಾಕಿಸ್ತಾನ ತನ್ನ ವಿಶ್ವಕಪ್ ತಂಡದಲ್ಲಿ ಮಹತ್ತರ ಬದಲಾವಣೆ ತಂದಿದ್ದು, ಹಿರಿಯ ಆಟಗಾರರನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡು ಅನನುಭವಿಗಳಿಗೆ ಗೇಟ್ಪಾಸ್ ನೀಡಿದೆ.
ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಒಂದೂ ಪಂದ್ಯ ಗೆಲ್ಲದೇ ನಿರಾಸೆಯನುಭವಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮರಳಿ ಹಿರಿಯ ಆಟಗಾರರಿಗೆ ಮಣೆ ಹಾಕಿದೆ.
ಕಳೆದ ತಿಂಗಳು ವಿಶ್ವಕಪ್ ಮಹಾ ಟೂರ್ನಿಗೆ 15 ಸದಸ್ಯರ ತಂಡವನ್ನು ಘೋಷಿಸಿದ್ದ ಪಿಸಿಬಿ ಹಿರಿಯರಾದ ಅಮಿರ್, ವಹಾಬ್ ರಿಯಾಜ್ ಹಾಗೂ ಸ್ಫೋಟಕ ಆಟಗಾರ ಆಸಿಫ್ ಅಲಿಯನ್ನು ವಿಶ್ವಕಪ್ಗೆ ಆಯ್ಕೆಮಾಡಿರಲಿಲ್ಲ.
ಇಂಗ್ಲೆಂಡ್ ವಿರುದ್ಧ 4-0 ದಿಂದ ಸೋಲನುಭವಿಸಿದ ಮೇಲೆ ಅನನುಭವಿಗಳಾದ ಅಬಿದ್ ಅಲಿ, ಜುನೈದ್ ಖಾನ್ ಹಾಗೂ ಫಾಹೀಮ್ ಅಶ್ರಫ್ರನ್ನು ತಂಡದಿಂದ ಕೈಬಿಟ್ಟು ಹಿರಿಯ ಆಟಗಾರರನ್ನು ಮತ್ತೆ ಕರೆಸಿಕೊಂಡಿದೆ.
ಅಮೀರ್ 2017ರಲ್ಲಿ ಇಂಗ್ಲೆಂಡ್ನಲ್ಲೇ ನಡೆದಿದ್ದ ಚಾಂಪಿಯನ್ ಟ್ರೋಫಿಯಲ್ಲಿ ಅದ್ಭುತ ಪ್ರದರ್ಶನ ತೋರಿದ್ದರು. ಇನ್ನು ಆಸಿಫ್ ಅಲಿ ಮಧ್ಯಮ ಕ್ರಮಾಂಕದಲ್ಲಿ ಸ್ಫೋಟಕ ಆಟಗಾರನಾಗಿದ್ದು, ಪಿಎಸ್ಎಲ್ ಹಾಗೂ ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ತೋರಿದ ಬೆನ್ನಲ್ಲೇ ತಂಡಕ್ಕೆ ವಾಪಸ್ ಕರೆಸಿಕೊಂಡಿದ್ದಾರೆ. ಇನ್ನು ವಹಾಬ್ ರಿಯಾಜ್ರನ್ನು ಅನುಭವದ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ. ರಿಯಾಜ್ ಇಂಗ್ಲೆಂಡ್ನಲ್ಲಿ ನಡೆಯುವ ನಾಟ್ವೆಸ್ಟ್ ಟಿ-20 ಬ್ಲಾಸ್ಟ್ನಲ್ಲಿ ಕಳೆದರೆಡು ವರ್ಷಗಳಿಂದ ಸಕ್ರಿಯರಾಗಿದ್ದು ಉತ್ತಮ ಪ್ರದರ್ಶನ ತೋರಿಸುತ್ತಿದ್ದಾರೆ.