ಲಂಡನ್: ಕ್ರಿಕೆಟ್ನ ಬೈಬಲ್ ಎಂದೇ ಕರೆಸಿಕೊಳ್ಳುವ ವಿಸ್ಡನ್ ಪ್ರಕಟಿಸಿರುವ ದಶಕದ ಟೆಸ್ಟ್ ತಂಡಕ್ಕೆ ವಿರಾಟ್ ಕೊಹ್ಲಿ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಕ್ರಿಕೆಟ್ ಇತಿಹಾಸದ ಅತ್ಯಂತ ಹಳೆಯ ಪ್ರಶಸ್ತಿ ಎಂಬ ಖ್ಯಾತಿ ಪಡೆದಿರುವ ವಿಸ್ಡನ್ ಕಳೆದು 10 ವರ್ಷಗಳ ವಿಶ್ವದ ಎಲ್ಲ ತಂಡಗಳ ಆಟಗಾರರು ಕಳೆದ 10 ವರ್ಷಗಳಲ್ಲಿ ನೀಡಿರುವ ಪ್ರದರ್ಶನದ ಮೇರೆಗೆ ತನ್ನ ಸಲಹಾ ಸಮಿತಿಯಲ್ಲಿ ಚರ್ಚೆ ನಡೆಸಿ ತಲಾ 11 ಆಟಗಾರರುಳ್ಳ ಟೆಸ್ಟ್ ಹಾಗೂ ಏಕದಿನ ತಂಡವನ್ನು ಪ್ರಕಟಿಸಿದೆ.
ವಿಸ್ಡನ್ ಟೆಸ್ಟ್ ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ರವಿಚಂದ್ರನ್ ಸ್ಥಾನ ಪಡೆದುಕೊಂಡಿರುವ ಭಾರತೀಯ ಆಟಗಾರರಾಗಿದ್ದಾರೆ. ಕೊಹ್ಲಿ ಈ ಹತ್ತು ವರ್ಷಗಳಲ್ಲಿ 84 ಪಂದ್ಯಗಳಿಂದ 27 ಶತಕ, 22 ಅರ್ಧಶತಕದ ಸಹಿತ 7,202 ರನ್ಗಳಿಸಿದ್ದರೆ, ಅಶ್ವಿನ್ 70 ಟೆಸ್ಟ್ ಪಂದ್ಯಗಳಲ್ಲಿ 362 ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿದ್ದಾರೆ. ಇವರು 27 ಬಾರಿ 5 ವಿಕೆಟ್ ಪಡೆದಿದ್ದಾರೆ. ವಿರಾಟ್ ಈ ತಂಡದ ನಾಯಕನೂ ಆಗಿದ್ದಾರೆ.
ಇನ್ನು ಏಕದಿನ ತಂಡದಲ್ಲೂ ಕೊಹ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಜೊತೆಗೆ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ರೋಹಿತ್ ಶರ್ಮಾರನ್ನು ಕೂಡ ವಿಸ್ಡನ್ ಟೀಮ್ ಆಯ್ಕೆ ಮಾಡಿದೆ.
ಈ ದಶಕದಲ್ಲಿ ಕೊಹ್ಲಿ 242 ಪಂದ್ಯಗಳಲ್ಲಿ 59.84ರ ಸರಾಸರಿಯಲ್ಲಿ 11609 ರನ್ಗಳಿಸಿದ್ದಾರೆ. ಇದರಲ್ಲಿ 43 ಶತಕ, 55 ಅರ್ಧಶತಕ ಸೇರಿದೆ. ರೋಹಿತ್ ಶರ್ಮಾ 221 ಏಕದಿನ ಪಂದ್ಯಗಳಲ್ಲಿ 8944 ರನ್ ಸಿಡಿಸಿದ್ದಾರೆ. ಇವರು 28 ಶತಕ, 43 ಅರ್ಧಶತಕ ಸಿಡಿಸಿದ್ದಲ್ಲದೆ 2019ರಲ್ಲಿ ಅತಿ ಹೆಚ್ಚು ರನ್ಗಳಿಸಿದ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಎಂಎಸ್ ಧೋನಿ 350 ಏಕದಿನ ಪಂದ್ಯಗಳಲ್ಲಿ 10773 ರನ್ ರನ್ಗಳಿಸಿದ್ದಾರೆ. ಇದರಲ್ಲಿ 10 ಶತಕ 73 ಅರ್ಧಶತಕ ದಾಖಲಿಸಿದ್ದಾರೆ. ಈ ಮೂವರನ್ನು ಬಿಟ್ಟರೆ ಯಾವುದೇ ಭಾರತೀಯ ಬೌಲರ್ ಏಕದಿನ ವಿಸ್ಡನ್ ತಂಡದಲ್ಲಿ ಅವಕಾಶ ಪಡೆದಿಲ್ಲ.
ವಿಸ್ಡನ್ ಪ್ರಕಟಿಸಿದ ದಶಕದ ಏಕದಿನ ತಂಡ :
ರೋಹಿತ್ ಶರ್ಮಾ(ಭಾರತ), ಡೇವಿಡ್ ವಾರ್ನರ್(ಆಸ್ಟ್ರೇಲಿಯಾ) , ವಿರಾಟ್ ಕೊಹ್ಲಿ (ಭಾರತ), ಎಬಿ ಡಿ ವಿಲಿಯರ್ಸ್(ದಕ್ಷಿಣ ಆಫ್ರಿಕಾ), ಜೋಸ್ ಬಟ್ಲರ್(ಇಂಗ್ಲೆಂಡ್), ಎಂ.ಎಸ್. ಧೋನಿ(ಭಾರತ), ಶಕೀಬ್ ಅಲ್ ಹಸನ್(ಬಾಂಗ್ಲಾದೇಶ), ಲಸಿತ್ ಮಲಿಂಗಾ(ಶ್ರೀಲಂಕಾ), ಮಿಚೆಲ್ ಸ್ಟಾರ್ಕ್(ಆಸ್ಟ್ರೇಲಿಯಾ), ಟ್ರೆಂಟ್ ಬೌಲ್ಟ್(ನ್ಯೂಜಿಲ್ಯಾಂಡ್), ಡೇಲ್ ಸ್ಟೇನ್(ದಕ್ಷಿಣ ಆಫ್ರಿಕಾ)
ವಿಸ್ಡನ್ ಪ್ರಕಟಿಸಿದ ದಶಕದ ಟೆಸ್ಟ್ ತಂಡ
ಆಲಿಸ್ಟರ್ ಕುಕ್(ಇಂಗ್ಲೆಂಡ್), ಡೇವಿಡ್ ವಾರ್ನರ್(ಆಸ್ಟ್ರೇಲಿಯಾ),ಕುಮಾರ್ ಸಂಗಾಕ್ಕರ(ಶ್ರೀಲಂಕಾ), ಸ್ಟಿವ್ ಸ್ಮಿತ್(ಆಸ್ಟ್ರೇಲಿಯಾ), ವಿರಾಟ್ ಕೊಹ್ಲಿ(ಭಾರತ), ಎಬಿ ಡಿ ವಿಲಿಯರ್ಸ್(ದಕ್ಷಿಣ ಆಫ್ರಿಕಾ), ಬೆನ್ಸ್ಟೋಕ್ಸ್(ಇಂಗ್ಲೆಂಡ್), ರವಿಚಂದ್ರನ್ ಅಶ್ವಿನ್(ಭಾರತ),ಡೇಲ್ ಸ್ಟೈನ್(ದಕ್ಷಿಣ ಆಫ್ರಿಕಾ), ಕಗಿಸೊ ರಬಾಡ(ದಕ್ಷಿಣ ಆಫ್ರಿಕಾ), ಜೇಮ್ಸ್ ಆ್ಯಂಡರ್ಸನ್(ಇಂಗ್ಲೆಂಡ್)