ಕಿಂಗ್ಸ್ಟನ್: ವೆಸ್ಟ್ ಇಂಡೀಸ್ ತಂಡದ ಯುವ ವೇಗಿ ಒಶೇನ್ ಥಾಮಸ್ ಜಮೈಕಾದಲ್ಲಿ ಭಾನುವಾರ ನಡೆದ ಕಾರು ಅಪಘಾತದಲ್ಲಿ ಕೂದಲೆಳೆಯಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
23 ವರ್ಷದ ಥಾಮಸ್, ಜಮೈಕಾದ ಸೇಂಟ್ ಕ್ಯಾಥರೀನ್ 2000ರ ಹೆದ್ದಾರಿಯಲ್ಲಿ ವೇಗವಾಗಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ತಕ್ಷಣ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ. ಇದೀಗ ಥಾಮಸ್ ಚೇತರಿಸಿಕೊಳ್ಳುತ್ತಿದ್ದಾರೆಂದು ತಿಳಿದುಬಂದಿದೆ.
ಕಾರು ಅಪಘಾತಕ್ಕೊಳಗಾಗಿರುವ ಥಾಮಸ್ ಬೇಗ ಚೇತರಿಸಿಕೊಳ್ಳುವಂತೆ ವೆಸ್ಟ್ ಇಂಡೀಸ್ ಕ್ರಿಕೆಟ್ ಪ್ಲೇಯರ್ಸ್ ಅಸೋಸಿಯೇಷನ್ ಟ್ವೀಟ್ ಮೂಲಕ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ.
2018ರಲ್ಲಿ ಭಾರತದ ವಿರುದ್ಧ ವೆಸ್ಟ್ ಇಂಡೀಸ್ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದ್ದ ಅವರು, 2019ರ ಏಕದಿನ ವಿಶ್ವಕಪ್ನಲ್ಲಿ ವಿಂಡೀಸ್ ತಂಡದ ಅವಿಭಾಜ್ಯ ಅಂಗವಾಗಿದ್ದರು. ಆದರೆ ಟೂರ್ನಿಯಲ್ಲಿ ಕೇವಲ 9 ವಿಕೆಟ್ ಪಡೆದಿದ್ದರಿಂದ ಅವರನ್ನು ವಿಂಡೀಸ್ ತಂಡದಿಂದ ಕೈಬಿಡಲಾಗಿತ್ತು. ಥಾಮಸ್ ವೆಸ್ಟ್ ಇಂಡೀಸ್ ಪರ 20 ಏಕದಿನ ಪಂದ್ಯಗಳಿಂದ 27 ವಿಕೆಟ್ ಹಾಗೂ 10 ಟಿ-20 ಪಂದ್ಯಗಳಿಂದ 9 ವಿಕೆಟ್ ಪಡೆದಿದ್ದಾರೆ.