ಸೇಂಟ್ ಜಾನ್ಸ್: ಭಾರತದ ಮಾಜಿ ಫೀಲ್ಡಿಂಗ್ ಕೋಚ್ ಟ್ರೆವರ್ ಪೆನ್ನಿ ವೆಸ್ಟ್ ಇಂಡೀಸ್ ತಂಡದ ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಇಂಗ್ಲೆಂಡ್ ವಾರ್ಕ್ಶೈರ್ ತಂಡದ ಮಾಜಿ ಆಟಗಾರರಾಗಿರುವ ಟ್ರೆವರ್ರನ್ನು ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ 2 ವರ್ಷದ ಅವಧಿಗೆ ಟಿ20 ಹಾಗೂ ಏಕದಿನ ಕ್ರಿಕೆಟ್ ತಂಡಗಳಿಗೆ ಸಹಾಯಕ ಕೋಚ್ ಆಗಿ ನೇಮಕ ಮಾಡಿಕೊಂಡಿದೆ.
ಈ ಕುರಿತು ಹೇಳಿಕೆ ನೀಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ, 51 ವರ್ಷದ ಟ್ರೆವರ್ ಅವರ ಫೀಲ್ಡಿಂಗ್ ಕ್ಷೇತ್ರದಲ್ಲಿನ ಅನುಭವ ವೈಟ್ ಬಾಲ್ ಕ್ರಿಕೆಟ್ನಲ್ಲಿ ವಿಂಡೀಸ್ ತಂಡಕ್ಕೆ ಅನುಕೂಲವಾಗಲಿದೆ. ಅವರು ಜನವರಿ 2 ರಂದು ತಂಡ ಸೇರಿಕೊಳ್ಳಲಿದ್ದು, ಐರ್ಲೆಂಡ್ ವಿರುದ್ಧದ ಏಕದಿನ ಹಾಗೂ ಟಿ20 ಸರಣಿಗೆ ತಂಡದ ಭಾಗವಾಗಲಿದ್ದಾರೆ ಎಂದು ತಿಳಿಸಿದೆ.
ವಿಂಡೀಸ್ ತಂಡಕ್ಕೆ ಕೋಚ್ ಆಗುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿರುವ ಟ್ರೆವರ್ ಪೆನ್ನಿ, ಕೀರನ್ ಪೊಲಾರ್ಡ್ ಹಾಗೂ ಕೋಚ್ ಫಿಲ್ ಸಿಮನ್ಸ್ ಜೊತೆ ಕೆಲಸ ಮಾಡುವುದಕ್ಕೆ ನನಗೆ ಉತ್ತಮ ಅವಕಾಶ ಸಿಕ್ಕಿದೆ. 2020 ಹಾಗೂ 2021ರ ಟಿ20 ವಿಶ್ವಕಪ್‌ನಲ್ಲಿ ವಿಂಡೀಸ್ ತಂಡ ಗೆಲ್ಲಿಸಿ ಕೊಡುವುದಕ್ಕೆ ಪ್ರಯತ್ನಿಸುತ್ತೇನೆ. ನನ್ನ ಪ್ರಕಾರ ವೆಸ್ಟ್ ಇಂಡೀಸ್ ತಂಡ ಈ ಎರಡು ದೊಡ್ಡ ಟೂರ್ನಿಗಳನ್ನು ಗೆಲ್ಲುವ ನೆಚ್ಚಿನ ತಂಡವಾಗಿದೆ ಎಂದಿದ್ದಾರೆ.
ಟ್ರೆವರ್ ಪೆನ್ನಿ ಈ ಹಿಂದೆ ಐಪಿಎಲ್ನ ಕಿಂಗ್ಸ್ ಇಲೆವೆನ್ ಪಂಜಾಬ್, ಡೆಕ್ಕನ್ ಚಾರ್ಜಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಸಹಾಯಕ ಕೋಚ್ ಆಗಿ ಸೇವೆ ಸಲ್ಲಿಸಿದ್ದರು. ಸಿಪಿಎಲ್ನಲ್ಲೂ ಸೇಂಟ್ ಲೂಸಿಯಾ ಜೌಕ್ಸ್, ಸೇಂಟ್ ಕಿಟ್ಸ್ ಅಂಡ್ ನೇವಿಸ್ ಪ್ಯಾಟ್ರಿಯೋಟ್ಸ್ ಹಾಗೂ ಪ್ರಸ್ತುತ ಚಾಂಪಿಯನ್ ಬಾರ್ಬಡಸ್ ಟ್ರಿಡೆಂಟ್ ತಂಡದ ಕೋಚ್ ಬಳಗದಲ್ಲೂ ಕಾರ್ಯ ನಿರ್ವಹಿಸಿದ್ದರು.