ಲಖನೌ: ಕಳೆದ ಕೆಲ ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿದಿದೆ. ಇಂಥ ವಾತಾವರಣದಿಂದಾಗಿ ಎನ್‌ಸಿಆರ್ ವ್ಯಾಪ್ತಿಯ ದೆಹಲಿ, ನವದೆಹಲಿ, ಗಾಜಿಯಾಬಾದ್, ನೊಯ್ಡಾ, ಗ್ರೇಟರ್ ನೊಯ್ಡಾ, ಗುರುಗ್ರಾಮ, ಫರೀದಾಬಾದ್ಗಳಲ್ಲಿ ಜನರು ಜೀವನ ನಡೆಸುವುದು ಕಷ್ಟಕರವಾಗಿದೆ. ಈ ಕಲುಷಿತ ಗಾಳಿಯ ಪರಿಣಾಮ ಉತ್ತರ ಪ್ರದೇಶದ ಮೇಲೂ ಆಗಿದೆ. ಲಕ್ನೋದಲ್ಲಿ ವೆಸ್ಟ್ ಇಂಡೀಸ್ vs ಆಘ್ಘಾನಿಸ್ತಾನ ತಂಡಗಳ ಮಧ್ಯೆ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದು ಆಟಗಾರರು ಮಾಸ್ಕ್ ಧರಿಸಿ ಆಟ ಆಡಿದ್ದು ಗಮನ ಸೆಳೆದಿದೆ.
ಇಲ್ಲಿನ ಭಾರತರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕತಾ ಕ್ರಿಕೆಟ್ ಮೈದಾನದಲ್ಲಿ ವೆಸ್ಟ್ ಇಂಡೀಸ್-ಆಫ್ಘಾನಿಸ್ತಾನ ತಂಡಗಳ ನಡುವೆ ನಡೆದ ಏಕದಿನ ಪಂದ್ಯದ ವೇಳೆ ಪ್ಲೇಯರ್ಸ್ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಕ್ರಿಕೆಟ್ ಆಡಿದ್ದಾರೆ.
ಆಫ್ಘಾನಿಸ್ತಾನದ ಪ್ಲೇಯರ್ಸ್ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕ್ಷೇತ್ರ ರಕ್ಷಣೆ ಮಾಡುತ್ತಿದ್ದ ವೆಸ್ಟ್ ಇಂಡೀಸ್ನ ಜಾಸನ್ ಹೋಲ್ಡರ್,ನಿಕೋಲಸ್ ಪೂರನ್ ಮತ್ತು ಕೀರನ್ ಪೊಲಾರ್ಡ್ ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವ ದೃಶ್ಯ ಕಂಡು ಬಂದಿದೆ.
ದೆಹಲಿಯಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಮೊದಲ ಟಿ-20 ಪಂದ್ಯದಲ್ಲೂ ಈ ಪರಿಸ್ಥಿತಿ ನಿರ್ಮಾಣಗೊಂಡಿದ್ದರಿಂದ ಕೆಲ ಆಟಗಾರರು ಮೈದಾನದಲ್ಲೇ ವಾಂತಿ ಮಾಡಿಕೊಂಡ ಘಟನೆಯೂ ನಡೆದಿತ್ತು.