ನವದೆಹಲಿ: ಇಲ್ಲಿನ ಅರುಣ್ ಜೇಟ್ಲಿ ಮೈದಾನದಲ್ಲಿ ನಾಳೆ ಭಾರತ ಮತ್ತು ಬಾಂಗ್ಲಾದೇಶ ನಡುವೆ ಮೊದಲ ಟಿ-20 ಪಂದ್ಯ ನಡೆಯಲಿದ್ದು, ನಾಳಿನ ಪಂದ್ಯಕ್ಕೆ ನಾವು ಸಿದ್ಧರಿದ್ದೇವೆ ಎಂದು ಟಿ-20 ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.
ನಾಳಿನ ಪಂದ್ಯದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಡನಾಡಿದ ರೋಹಿತ್ ಶರ್ಮಾ, ಮೊದಲು ಬ್ಯಾಟಿಂಗ್ ನಡೆಸಿದರೆ ನಾವು ಎಷ್ಟು ರನ್ ಕಲೆಹಾಕಬಹುದು. ಚೇಸ್ ಮಾಡಿದರೆ ಎಷ್ಟು ರನ್ ಬೆನ್ನತ್ತಬಹುದು ಎಂಬ ಬಗ್ಗೆ ಚರ್ಚೆ ನಡೆಸಿದ್ದೇವೆ. ನಾವು ಚೇಸಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದೇವೆ. ಆದರೆ ಮೊದಲು ಬ್ಯಾಟಿಂಗ್ ನಡೆಸಿದರೆ ನಮ್ಮ ಪ್ರದರ್ಶನ ನಿರೀಕ್ಷಿತ ಮಟ್ಟಕ್ಕಿಲ್ಲ ಎಂದಿದ್ದಾರೆ.
ಟಿ-20ಯಲ್ಲಿ ನಮ್ಮಿಂದ ನಿರೀಕ್ಷಿತ ಪ್ರದರ್ಶನ ಬಂದಿಲ್ಲ. ಹೀಗಾಗಿ ನಾವು ಐಸಿಸಿ ರ್ಯಾಂಕಿಂಗ್ನಲ್ಲಿ 5ನೇ ಸ್ಥಾನದಲ್ಲಿದ್ದೇವೆ. ನಮ್ಮ ತಂಡ ಕ್ರಿಕೆಟ್ನ ಮೂರೂ ಫಾರ್ಮೆಟ್ನಲ್ಲೂ ನಂಬರ್ 1 ತಂಡ ಆಗಬೇಕುಂಬುದು ನಮ್ಮ ಗುರಿ ಎಂದಿದ್ದಾರೆ.
ಇನ್ನು ಕೀಪಿಂಗ್ ವಿಭಾಗದಲ್ಲಿ ಪಂತ್ ಮತ್ತು ಸ್ಯಾಮ್ಸನ್ ಅವರಂತಹ ಉತ್ತಮ ಆಟಗಾರರನ್ನ ಹೊಂದಿದ್ದೇವೆ. ಇಬ್ಬರಲ್ಲಿ ಪಂತ್ಗೆ ನಮ್ಮ ಮೊದಲ ಆದ್ಯತೆ. ಪಂತ್ ಮನಸ್ಸು ಮಾಡಿದರೆ ಪಂದ್ಯದ ಗತಿಯನ್ನೇ ಬದಲಿಸುವಷ್ಟು ಶಕ್ತಿ ಇದೆ ಎಂದು ಯುವ ಆಟಗಾರನಿಗೆ ಬೆಂಬಲ ಸೂಚಿಸಿದ್ದಾರೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಕೆ.ಎಲ್.ರಾಹುಲ್, ಸಂಜು ಸ್ಯಾಮ್ಸನ್, ಶ್ರೇಯಸ್ ಐಯ್ಯರ್, ಮನಿಶ್ ಪಾಂಡೆ, ರಿಷಬ್ ಪಂತ್(ಕೀಪರ್), ವಾಷಿಂಗ್ಟನ್ ಸುಂದರ್, ಕೃನಾಲ್ ಪಾಂಡ್ಯ, ಯಜುವೇಂದ್ರ ಚಹಾಲ್, ರಾಹುಲ್ ಚಹಾರ್, ದೀಪಕ್ ಚಹಾರ್, ಖಲೀಲ್ ಅಹ್ಮದ್, ಶಿವಂ ದುಬೆ, ಶಾರ್ದೂಲ್ ಠಾಕೂರ್.