ಮೆಲ್ಬೋರ್ನ್: ಭಾರತ ಮತ್ತು ಆಸೀಸ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಬ್ರಿಸ್ಬೇನ್ನಲ್ಲೇ ನಡೆಯಲಿದೆ ಎಂದು ಆಸ್ಟ್ರೇಲಿಯಾ ಆಫ್ ಸ್ಪಿನ್ನರ್ ನಾಥನ್ ಲಿಯಾನ್ ಹೇಳಿದ್ದಾರೆ.
ಜನವರಿ 15 ರಿಂದ ಬ್ರಿಸ್ಬೇನ್‌ನಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ ಪಂದ್ಯಕ್ಕೂ ಮೊದಲು ನಮ್ಮ ತಂಡ ಸಿಡ್ನಿ ಪಂದ್ಯದ ಮೇಲೆ ಕೇಂದ್ರೀಕರಿಸಿದೆ ಎಂದು ಹೇಳಿದ್ದಾರೆ. ಬ್ರಿಸ್ಬೇನ್‌ಗೆ ಹೋಗುವುದು ಶೇಖಡಾ 100 ಕ್ಕೆ ನೂರರಷ್ಟು ಖಚಿತವಿದೆ, ಈ ಮೊದಲೇ ನಿರ್ಧರಿಸಿದ ಯೋಜನೆಗೆ ಅಂಟಿಕೊಂಡಿದ್ದೇವೆ ಎಂದು ಪತ್ರಿಕಾಗೊಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
"ನಾವು ಇಂದು ಸಿಡ್ನಿಗೆ ಪ್ರಯಾಣಿಸುತ್ತಿದ್ದೇವೆ ಮತ್ತು ಅಲ್ಲಿನ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸುವ ಆಶಾಭಾವನೆ ಹೊಂದಿದ್ದೇವೆ. ನಂತರ ನಾವು ಬ್ರಿಸ್ಬೇನ್‌ಗೆ ಪ್ರಯಾಣಿಸಲಿದ್ದೇವೆ ಎಂದು ಲಿಯಾನ್ ಹೇಳಿದ್ದಾರೆ.
ಗಬ್ಬಾದಲ್ಲಿ ಭಾರತ ಇನ್ನೂ ಕೂಡ ಟೆಸ್ಟ್ ಪಂದ್ಯ ಗೆದ್ದಿಲ್ಲ, ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಉತ್ತಮ ದಾಖಲೆ ಇದೆ ಎಂದು ಲಿಯಾನ್ ಹೇಳಿದ್ದಾರೆ. ಗಬ್ಬಾದಲ್ಲಿ ನಾವು ಕ್ರಿಕೆಟ್ ಆಡುವುದನ್ನು ಎಷ್ಟು ಇಷ್ಟಪಡುತ್ತೇವೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ನಮ್ಮ ಫಲಿತಾಂಶಗಳ ಜೊತೆಗೆ ನಮ್ಮ ದಾಖಲೆಗಳ ಬಗ್ಗೆಯೂ ನಮಗೆ ತಿಳಿದಿದೆ. ಆದ್ದರಿಂದ, ಗಬ್ಬಾಗೆ ಹೋಗುವ ಎಲ್ಲಾ ಯೋಜನೆಗಳು ಖಚಿತವಾಗಿರುತ್ತವೆ ಎಂದಿದ್ದಾರೆ.
ಆಸ್ಟ್ರೇಲಿಯಾಕ್ಕೆ ಆಗಮಿಸಿದ ನಂತರ ಕ್ವಾರಂಟೈನ್ ನಿಯಮ ಪಾಲಿಸಿರುವ ಟೀಂ ಇಂಡಿಯಾ ಆಟಗಾರರು ಬ್ರಿಸ್ಬೇನ್‌ನಲ್ಲಿ ಮತ್ತೊಂದು ಕ್ವಾರಂಟೈನ್ ಬಗ್ಗೆ ಅಸಮಾಧಾನ ಹೊಂದಿದ್ದಾರೆ ಎಂದು ಆಸ್ಟ್ರೇಲಿಯಾದ ಮಾಧ್ಯಮಗಳ ವರದಿ ಮಾಡಿವೆ.
ಓದಿ ಭಾರತ - ಆಸ್ಟ್ರೇಲಿಯಾ 3ನೇ ಟೆಸ್ಟ್: ಸಿಡ್ನಿ ಮೈದಾನದಲ್ಲಿ 25 ರಷ್ಟು ಪ್ರೇಕ್ಷಕರಿಗೆ ಅವಕಾಶ
ಎರಡೂ ಗುಂಪುಗಳಲ್ಲಿನ ಅನೇಕ ಆಟಗಾರರು ಆರು ತಿಂಗಳಿನಿಂದ ಬಯೋ ಬಬಲ್ನಲ್ಲಿ ಉಳಿದುಕೊಂಡಿದ್ದಾರೆ ಎಂದು ತಿಳಿದಿದೆ. ಆದರೆ, ಪ್ರಸ್ತುತ ಸಂದರ್ಭದಲ್ಲಿ ಇದನ್ನು "ಸಣ್ಣ ತ್ಯಾಗ" ಎಂದು ಲಿಯಾನ್ ಹೇಳಿದ್ದಾರೆ. ನನ್ನ ದೃಷ್ಟಿಯಲ್ಲಿ, ಇದು ತುಂಬಾ ಸಣ್ಣ ತ್ಯಾಗ, ನಾವು ಅಲ್ಲಿಗೆ ತಲುಪಿ, ನಾವು ಪ್ರೀತಿಸುವ ಆಟವನ್ನು ಆಡುವುದು ಮತ್ತು ಪ್ರಪಂಚದಾದ್ಯಂತದ ಜನರ ಮುಖದಲ್ಲಿ ತಂತಸ ಮೂಡಿಸುತ್ತದೆ ಎಂದು ಹೇಳಿದ್ದಾರೆ.