ಡೆಹ್ರಾಡೂನ್: ಉತ್ತರಾಖಂಡ ಕ್ರಿಕೆಟ್ ಅಸೋಸಿಯೇಷನ್ನ ಕೋಚ್ ಆಗಿ ನೇಮಕಗೊಂಡ ನಂತರ ವಾಸೀಮ್ ಜಾಫರ್ ಮೊದಲ ಬಾರಿಗೆ ರಾಜಧಾನಿ ಡೆಹ್ರಾಡೂನ್ಗೆ ಭೇಟಿ ನೀಡಿದ್ದು, ಭಾನುವಾರ ರಣಜಿ ಆಟಗಾರರ ಜೊತೆ ಕೆಲವು ಸಮಯ ಕಳೆದು, ಚರ್ಚೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ 'ಈಟಿವಿ ಭಾರತ'ಕ್ಕೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ಉತ್ತರಾಖಂಡ ತಂಡಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿರುವುದಾಗಿ ತಿಳಿಸಿದ್ದಾರೆ.
ಉತ್ತರಾಖಂಡ ತಂಡದ ಆಟಗಾರರು ಅತ್ಯುನ್ನತ ಸಾಮರ್ಥ್ಯವುಳ್ಳವರಾಗಿದ್ದಾರೆ. ಕಳೆದ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಆದರೆ ಒಂದು ಸಂಪೂರ್ಣ ತಂಡವಾಗಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲವಾಗಿದ್ದಾರೆ ಎಂದಿದ್ದಾರೆ.
ಮಾತು ಮುಂದುವರಿಸಿ, ಆಟಗಾರರ ಕೌಶಲವನ್ನು ಹೆಚ್ಚಿಸುವುದು ಮತ್ತು ಉತ್ತರಾಖಂಡ ರಣಜಿ ತಂಡವನ್ನು ಬೇರೆ ಹಂತಕ್ಕೆ ಕೊಂಡೊಯ್ಯುವುದು ನನ್ನ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಪ್ರಸ್ತುತ ಉತ್ತರಾಖಂಡ ಹಿರಿಯರ ತಂಡ 2019ರ ಋತುವಿನಲ್ಲಿ ಗ್ರೂಪ್ ಸಿ ಯಲ್ಲಿ ಕೊನೆಯ ಸ್ಥಾನ ಪಡೆದಿದ್ದರಿಂದ ಪ್ಲೇಟ್ ಗ್ರೂಪ್‌ಗೆ ಕುಸಿದಿದೆ.
ಆದ್ದರಿಂದ ತಂಡವನ್ನು ಮತ್ತೆ ಎಲೈಟ್ ಗ್ರೂಪ್‌ಗೆ ಏರಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಅದಕ್ಕಾಗಿ ಪ್ರಯತ್ನಗಳನ್ನು ಮಾಡಲಾಗುವುದು. ಉನ್ನತ ಟೂರ್ನಮೆಂಟ್ಗಳಲ್ಲಿ ಉತ್ತಮ ಸಾಧನೆ ಮಾಡಲು ಆಟಗಾರರನ್ನು ಕೌಶಲದಿಂದ ಸಜ್ಜುಗೊಳಿಸುವ ತಂತ್ರವನ್ನು ಹೊಂದಿರುವುದಾಗಿ ಜಾಫರ್ ಹೇಳಿದ್ದಾರೆ.
ಮುಂದಿನ ಋತುವಿನಲ್ಲಿ ತಮ್ಮ ತಂಡದಿಂದ ಉತ್ತಮ ಪ್ರದರ್ಶನವನ್ನು ಜಾಫರ್ ಆಶಿಸಿದ್ದಾರೆ. ತಾವು ಮಂಡಳಿ ಸೇರಿರುವುದರಿಂದ ಆಟಗಾರರು ಉತ್ಸುಕರಾಗಿದ್ದಾರೆ. ಈ ತಂಡ ನಾಕೌಟ್ ಹಂತ ಪ್ರವೇಶಿಸುವುದು ನಿಜಕ್ಕೂ ಸವಾಲಿನದ್ದಾಗಿದೆ ಎಂದು ತಿಳಿಸಿದ್ದಾರೆ.