ಡೆಹ್ರಾಡೂನ್: ಉತ್ತರಾಖಂಡ್ನ ಹಿರಿಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನಕ್ಕೆ ವಾಸೀಂ ಜಾಫರ್ ರಾಜೀನಾಮೆ ನೀಡಿರುವುದು ಅನೇಕ ಗೊಂದಲಗಳಿಗೆ ಕಾರಣವಾಗಿದ್ದು, ಇದರ ತನಿಖೆ ನಡೆಸಲು ಅಲ್ಲಿನ ಮುಖ್ಯಮಂತ್ರಿ ಆದೇಶ ನೀಡಿದ್ದಾರೆ.
ವಾಸೀಂ ಜಾಫರ್ ಕೋಚ್ ಆಗಿದ್ದ ಸಂದರ್ಭದಲ್ಲಿ ಧರ್ಮ ಆಧಾರಿತ ಆಯ್ಕೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದೇ ಕಾರಣಕ್ಕಾಗಿ ಅವರು ಕಳೆದ ಫೆ. 8ರಂದು ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಪ್ರಕರಣದ ತನಿಖೆ ನಡೆಸುವಂತೆ ಆದೇಶ ನೀಡಿದ್ದಾರೆ.
ಓದಿ: ಕೋಚ್ ಶಿಫಾರಸುಗಳನ್ನು ಸ್ವೀಕರಿಸದಿದ್ದರೆ ಆ ಸ್ಥಾನದಲ್ಲಿದ್ದು ಪ್ರಯೋಜನವೇನು: ಜಾಫರ್ ಪ್ರಶ್ನೆ
ವಾಸೀಂ ಜಾಫರ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಉತ್ತರಾಖಂಡ ಕ್ರಿಕೆಟ್ ಅಸೋಷಿಯೇಷನ್ ಮುಖ್ಯಮಂತ್ರಿ ರಾವತ್ ಅವರನ್ನ ಭೇಟಿ ಮಾಡಿ ಚರ್ಚೆ ನಡೆಸಿತ್ತು. ತಂಡದ ಆಯ್ಕೆಯಲ್ಲಿ ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಹಸ್ತಕ್ಷೇಪ ಮಾಡುತ್ತಿದ್ದು, ಅದರಿಂದ ಬೇಸತ್ತು ತಾವು ಕೋಚ್ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದಾಗಿ ಜಾಫರ್ ಹೇಳಿದ್ದರು. ಆದರೆ, ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಉತ್ತರಾಖಂಡ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮಹೀಮ್ ವರ್ಮಾ, ಜಾಫರ್ ತಮ್ಮ ಧರ್ಮದ ಆಟಗಾರರಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂದು ಆರೋಪ ಮಾಡಿದ್ದರು.