ಬ್ರಿಸ್ಬೇನ್ : ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕೆಳಕ್ರಮಾದ ವಾಷಿಂಗ್ಟನ್ ಸುಂದರ್ ಮತ್ತು ಶಾರ್ದುಲ್ ಠಾಕೂರ್ ಅವರ ಶಿಸ್ತುಬದ್ಧ ಬ್ಯಾಟಿಂಗ್‌ನಿಂದಾಗಿ ಟೆಸ್ಟ್ ಸರಣಿ ನಿರ್ಣಾಯಕ ಪಂದ್ಯ ಸ್ಪರ್ಧೆಯಿಂದ ಕೂಡಿದೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾದ 369 ರನ್ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಭಾರತ ತಂಡ 186ಕ್ಕೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಒಂದುಗೂಡಿದ ವಾಷಿಂಗ್ಟನ್ ಸುಂದರ್(62) ಮತ್ತು ಶಾರ್ದುಲ್(67) 8ನೇ ವಿಕೆಟ್ ಜೊತೆಯಾಟದಲ್ಲಿ 123 ರನ್ ಸೇರಿಸುವ ಮೂಲಕ ತಂಡದ ಮೊತ್ತವನ್ನು 300ರ ಗಡಿದಾಟಿಸಿ ಇನ್ನಿಂಗ್ಸ್ ಹಿನ್ನಡೆಯನ್ನು ಸಣ್ಣ ಮೊತ್ತಕ್ಕೆ ತಂದು ನಿಲ್ಲಿಸಿದರು.
ಅವರ ಬ್ಯಾಟ್ಸ್ಮನ್ಶಿಪ್ ನಿಜಕ್ಕೂ ಅಸಾಧಾರಣ ಗುಣಮಟ್ಟವಾಗಿತ್ತು. ತಂಡಕ್ಕೆ ಅಗತ್ಯವಾಗಿದ್ದ ಸಂದರ್ಭದಲ್ಲಿ ಅತ್ಯುತ್ತಮ ಜೊತೆಯಾಟ ನೀಡಿದರು. ಈ ವೇಳೆ ಅವರ ಏಕಾಗ್ರತೆ ಮತ್ತು ಅವಿರತ್ನ ಪ್ರಯತ್ನದ ಜೊತೆಗೆ ವಿಕೆಟ್ ಕಳೆದುಕೊಳ್ಳದೆ ಜಾಣ್ಮೆ ತೋರಿದರು ಎಂದು ಆಸ್ಟ್ರೇಲಿಯಾ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ಪಾಂಟಿಂಗ್ ಬಣ್ಣಿಸಿದ್ದಾರೆ.
ಶಾರ್ದುಲ್ ದೊಡ್ಡ ಹೊಡೆತಕ್ಕೆ ಪ್ರಯತ್ನಿಸಿದ್ರೂ, ಅದು ಸಾಕಷ್ಟು ಬಲವಿಲ್ಲದ ಕಾರಣ ವಿಫಲರಾದರು. ಆದರೆ, ಅದಕ್ಕೂ ಮುನ್ನ ಅವರು ಹೊಡೆದ ಹೊಡೆತಗಳಲ್ಲಿ ಯಾವುದೇ ಪೊಳ್ಳು ಹೊಡೆತವಿರಲಿಲ್ಲ ಎಂದು ಆಸೀಸ್ ಮಾಜಿ ನಾಯಕ ತಿಳಿಸಿದ್ದಾರೆ.
ಆಸ್ಟ್ರೇಲಿಯಾ ಬೌಲಿಂಗ್ ಬಗ್ಗೆ ಮಾತನಾಡಿದ ಅವರು "ಭಾರತೀಯ ಕೆಳ ಕ್ರಮಾಂಕದ ವಿರುದ್ಧ ಬೌಲಿಂಗ್ ಮಾಡುವ ವೇಳೆ ಆಸ್ಟ್ರೇಲಿಯಾ ಬೌಲರ್ಗಳಲ್ಲಿ ಸಾಕಷ್ಟು ಆಕ್ರಮಕಾರಿ ಮನೋಭಾವಿರಲಿಲ್ಲ. ಅವರು ಶಾರ್ಟ್ ಪಿಚ್ ಎಸೆತಗಳನ್ನ ಹೆಚ್ಚು ಎಸೆದರು.
ಇದರಿಂದ ಭಾರತೀಯ ಬ್ಯಾಟ್ಸ್ಮನ್ಗಳು ಆರಾಮದಾಯಕವಾಗಿ ಕ್ರೀಸ್ನಲ್ಲಿ ನೆಲೆಯೂರಿದರು. ಅಲ್ಲದೆ ಅವರಿಗೆ ಸೊಗಸಾಗಿ ಬ್ಯಾಟಿಂಗ್ ಮಾಡಬಹುದಾದ ಜಾಗದಲ್ಲೇ ನಮ್ಮ ಬೌಲರ್ಗಳು ಬೌಲಿಂಗ್ ಮಾಡುತ್ತಿದ್ದರು" ಎಂದು ಪಾಂಟಿಂಗ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನು ಓದಿ:110 ವರ್ಷಗಳ ಹಿಂದಿನ ದಾಖಲೆ ಬ್ರೇಕ್ ಮಾಡಿದ ವಾಷಿಂಗ್ಟನ್ ಸುಂದರ್