ಚೆನ್ನೈ: ವೈದ್ಯರ ಕರೆ ಬರುವುದಕ್ಕಿಂತ ಮುಂಚೆ ಶಾರ್ದೂಲ್ ಠಾಕೂರ್-ವಾಷಿಂಗ್ಟನ್ ಸುಂದರ್ ಇನ್ನಿಂಗ್ಸ್ ವೀಕ್ಷಣೆ ಮಾಡುತ್ತಿದ್ದೆ ಎಂದು ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅನುಷ್ಕಾ ಶರ್ಮಾ ಆಸ್ಪತ್ರೆಯಲ್ಲಿ ದಾಖಲಾಗಿ ಮೊದಲ ಮಗುವಿಗೆ ಜನ್ಮ ನೀಡುತ್ತಿದ್ದ ವೇಳೆ ನಾನು ಮೊಬೈಲ್ನಲ್ಲಿ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯ ವೀಕ್ಷಣೆ ಮಾಡ್ತಿದ್ದೆ. ಈ ವೇಳೆ ಟೀಂ ಇಂಡಿಯಾದ ಶಾರ್ದೂಲ್ ಠಾಕೂರ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ನಡೆಸುತ್ತಿದ್ದರು ಎಂದಿದ್ದಾರೆ. ಆಸ್ಟ್ರೇಲಿಯಾದಲ್ಲಿ ಯಂಗ್ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದ್ದರಿಂದಲೇ ಗೆಲುವು ಸಾಧ್ಯವಾಯಿತು ಎಂದಿದ್ದಾರೆ.
ಓದಿ: ವಿಜಯ್ ಹಜಾರೆ ಟ್ರೋಫಿ: ತಮಿಳುನಾಡು ತಂಡ ಸೇರಿಕೊಂಡ ಟಿ.ನಟರಾಜನ್!
ತಂದೆಯಾಗಿರುವುದು ನನ್ನ ಜೀವನದಲ್ಲಿ ಅತಿ ಮಹತ್ವದ ಕ್ಷಣಗಳಲ್ಲಿ ಒಂದಾಗಿದ್ದು, ಅನುಭವಿಸಬೇಕಾದ ಸಂಗತಿಗಳಲ್ಲಿ ಒಂದಾಗಿದೆ ಎಂದು ಕೊಹ್ಲಿ ಹೇಳಿದ್ದಾರೆ. 32 ವರ್ಷದ ವಿರಾಟ್ ಕೊಹ್ಲಿ ಸದ್ಯ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿದ್ದು, ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ರನ್ ಗಳಿಸುವ ಹುಮ್ಮಸ್ಸಿನಲ್ಲಿದ್ದಾರೆ.
ತಂಡದೊಂದಿಗಿನ ಸಂಪರ್ಕ ಕಡಿತಗೊಳಿಸಲು ಸಾಧ್ಯವಿಲ್ಲ. ನಾನು ತಂಡದಲ್ಲಿ ಇಲ್ಲದ ವೇಳೆ ಕೂಡ ಎಲ್ಲಾ ಪಂದ್ಯ ವೀಕ್ಷಣೆ ಮಾಡುತ್ತೇನೆ. ಕೊನೆ ಟೆಸ್ಟ್ ಪಂದ್ಯ ಕೂಡ ನಾನು ವೀಕ್ಷಣೆ ಮಾಡುತ್ತಿದ್ದೆ. ಆಸ್ಟ್ರೇಲಿಯಾದಲ್ಲಿ ತಂಡ ಗೆಲುವು ಸಾಧಿಸಿರುವ ಕ್ರೆಡಿಟ್ ಎಲ್ಲರಿಗೂ ಸಲ್ಲಬೇಕು. ಅದಕ್ಕೆ ಎಲ್ಲಾ ಆಟಗಾರರು ಅರ್ಹರಾಗಿದ್ದಾರೆ ಎಂದಿದ್ದಾರೆ.