ನವದೆಹಲಿ: ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹೀನಾಯ ಪ್ರದರ್ಶನ ನೀಡುತ್ತಿದ್ದು, ತಂಡದಲ್ಲಿರುವ ಕೆಲ ಆಟಗಾರರು ಕಳಪೆ ಪ್ರದರ್ಶನ ಮುಂದುವರೆಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ಆಡಿರುವ ಆರು ಪಂದ್ಯಗಳ ಪೈಕಿ ಕೇವಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಸದ್ಯ ಅಂಕ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 168ರನ್ಗಳ ಗುರಿ ಬೆನ್ನಟ್ಟಿದ ತಂಡ ಕೇವಲ 157ರನ್ಗಳಿಕೆ ಮಾಡಿ ಸೋಲು ಕಂಡಿತ್ತು. ಈ ವೇಳೆ, ತಂಡಕ್ಕೆ ಸುಲಭವಾಗಿ ಜಯ ಸಾಧಿಸುವ ಚಾನ್ಸ್ ಇದ್ದರೂ ರನ್ಗಳಿಸಲಾಗದೇ ಸೋಲು ಕಾಣುತ್ತದೆ. ಇದೇ ವಿಷಯವನ್ನಿಟ್ಟುಕೊಂಡು ವಿರೇಂದ್ರ ಸೆಹ್ವಾಗ್ ಚೆನ್ನೈ ತಂಡದ ಕೆಲ ಪ್ಲೇಯರ್ಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
![Virender Sehwag has taken a dig at Chennai Super Kings](https://etvbharatimages.akamaized.net/etvbharat/prod-images/768-512-2997826-thumbnail-3x2-uu_0910newsroom_1602236307_619.jpg)
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದಿದ್ದ ಸಿಎಸ್ಕೆ ಬ್ಯಾಟ್ಸ್ಮನ್ ಕೇದಾರ್ ಜಾಧವ್ 12 ಎಸೆತಗಳಲ್ಲಿ ಕೇವಲ 7ರನ್ಗಳಿಕೆ ಮಾಡಿದ್ದು, ಜತೆಗೆ ಮತ್ತೊಬ್ಬ ಪ್ಲೇಯರ್ ರವೀಂದ್ರ ಜಡೇಜಾಗೆ ಬ್ಯಾಟಿಂಗ್ ಅವಕಾಶ ನೀಡದೇ ಇರುವುದು ತಂಡದ ಸೋಲಿಗೆ ಕಾರಣವಾಗಿತ್ತು ಎಂಬ ಮಾತು ಕೇಳಿ ಬರಲು ಶುರುವಾಗಿವೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸ್ಪೋಟಕ ಬ್ಯಾಟ್ಸಮನ್ ವಿರೇಂದ್ರ ಸೆಹ್ವಾಗ್ ಕೂಡ ಹೆಸರು ಹೇಳದೇ ಬ್ಯಾಟ್ಸಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವುದು ಎಂದರೆ ಸರ್ಕಾರಿ ಕೆಲಸವಿದ್ದಂತೆ. ಅವರು ತಂಡಕ್ಕಾಗಿ ಉತ್ತಮವಾಗಿ ಆಡಲಿ, ಬಿಡಲಿ ಸಂಬಳ ಮಾತ್ರ ಬರುತ್ತಲೇ ಇರುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಚೆನ್ನೈ 11-14 ಓವರ್ಗಳಲ್ಲಿ ಕೇವಲ 11ರನ್ಗಳಿಕೆ ಮಾಡಿತ್ತು. ಜತೆಗೆ ಅಂಬಾಟಿ ರಾಯುಡು ಜಾಗಕ್ಕೆ ವೆಸ್ಟ್ ಇಂಡೀಸ್ ಆಲ್ರೌಂಡರ್ ಡ್ವೇನ್ ಬ್ರಾವೋಗೆ ಬ್ಯಾಟಿಂಗ್ ಮಾಡಲು ಕಳುಹಿಸದಿರುವುದು ಕೂಡ ತಂಡದ ಸೋಲಿಗೆ ಕಾರಣವಾಗಿತ್ತು. ಇದೀಗ ಧೋನಿ ನೇತೃತ್ವದ ಸಿಎಸ್ಕೆ ನಾಳೆಯ ಪಂದ್ಯದಲ್ಲಿ ಬೆಂಗಳೂರು ವಿರುದ್ಧ ಸೆಣಸಾಟ ನಡೆಸಲಿದೆ.