ಮುಂಬೈ: ಭಾರತ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ಎಂ ಎಸ್ ಧೋನಿ ಏಕದಿನ ವಿಶ್ವಕಪ್ನ ನಂತರ ಕ್ರಿಕೆಟ್ಗೆ ಗುಡ್ ಬೈ ಹೇಳುತ್ತಾರೆ ಎಂಬ ಸುದ್ದಿ ಕ್ರಿಕೆಟ್ ವಲಯದಲ್ಲಿ ಕೇಳಿ ಬಂದಿತ್ತು. ಆದರೆ ಧೋನಿ ಇನ್ನೂ ಒಂದು ವರ್ಷ ತಮ್ಮ ನಿರ್ಧಾರವನ್ನು ಮುಂದೂಡುವಂತೆ ಕೊಹ್ಲಿ ಒತ್ತಾಯಿಸಿದ್ದಾರೆ ಎಂಬ ವಿಚಾರ ಗೊತ್ತಾಗಿದೆ.
ಧೋನಿ ನಾಯಕತ್ವದಿಂದ ಕೆಳಗಿಳಿದ ಬಳಿಕ ಭಾರತ ತಂಡದ ನಾಯಕತ್ವ ಜವಾಬ್ದಾರಿಯನ್ನು ವಿರಾಟ್ ಕೊಹ್ಲಿ ವಹಿಸಿಕೊಂಡಿದ್ದು, ಧೋನಿಯ ಮಾರ್ಗದರ್ಶನದಲ್ಲಿ ಇಲ್ಲಿಯವರೆಗೂ ತಂಡವನ್ನು ಮುನ್ನೆಡೆಸಿಕೊಂಡು ಬಂದಿದ್ದಾರೆ. ಅಲ್ಲದೆ ಧೋನಿ ಕೆಲವು ಪಂದ್ಯಗಳಲ್ಲಿ ರನ್ ಗಳಿಸಲು ಪರದಾಡಿದಾಗ ಅವರ ಬೆನ್ನಿಗೆ ಸದಾ ನಿಲ್ಲುತ್ತಿದ್ದ ಕೊಹ್ಲಿ, ಇದೀಗ ನಿವೃತ್ತಿಯಂಚಿನಲ್ಲಿರುವ ಅವರನ್ನು ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ವರೆಗೆ ತಂಡದ ಜೊತೆಯಲ್ಲಿರುವಂತೆ ಕೇಳಿಕೊಂಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
ವಿಶ್ವಕಪ್ನಲ್ಲಿ ಧೋನಿ ಆಡಿದ ಕೆಲವು ಇನ್ನಿಂಗ್ಸ್ಗಳು ಟೀಕೆಗೆ ಗುರಿಯಾಗಿದ್ದವು. ಕೆಲ ಹಿರಿಯ ಆಟಗಾರರು ಧೋನಿಗೆ ನಿವೃತ್ತಿ ಸಮಯ ಬಂದಾಗಿದೆ, ಯುವ ಕ್ರಿಕೆಟಿಗರಿಗೆ ಅವಕಾಶ ಮಾಡಿಕೊಟ್ಟು ಅವರು ನಿವೃತ್ತಿ ಹೊಂದಬೇಕು ಎಂದಿದ್ದರು. ಇನ್ನು ಆಯ್ಕೆ ಸಮಿತಿ ಅಧ್ಯಕ್ಷ ಎಂಎಸ್ಕೆ ಪ್ರಸಾದ್ ಕೂಡ ಧೋನಿ ನಮ್ಮ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ, ಅವರು ತಂಡದಲ್ಲಿ ಸಾಮಾನ್ಯ ಆಟಗಾರನಾಗಿರುತ್ತಾರೆ ಎಂದಿದ್ದರು.
ಇದೀಗ ಧೋನಿ ಫಿಟ್ನೆಸ್ ಉತ್ತಮವಾಗಿರುವುದರಿಂದ ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ವರೆಗೂ ತಂಡದಲ್ಲಿ ಮುಂದುವರಿಯುವಂತೆ ಕೊಹ್ಲಿ ಧೋನಿಯ ಮನವೊಲಿಸಿದ್ದಾರೆ. ಯುವ ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ವಿಕೆಟ್ ಕೀಪಿಂಗ್ಗೆ ಮೊದಲ ಆದ್ಯತೆಯಾಗಿ ಪರಿಗಣಿಸಿರೋದ್ರಿಂದ ಅವರು ಗಾಯಕ್ಕೆ ತುತ್ತಾದರೆ, ಹೊಸ ಕೀಪರ್ ಬದಲು ಧೋನಿ ಕೀಪಿಂಗ್ ಹೊಣೆ ಹೊರಲಿ ಎಂಬ ಬಯಕೆ ವ್ಯಕ್ತಪಡಿಸಿದ್ದಾರೆ.