ಇಂದೋರ್: ಭಾರತ ಟೆಸ್ಟ್ ತಂಡದ ಯಶಸ್ವಿ ನಾಯಕನಾಗಿರುವ ವಿರಾಟ್ ಕೊಹ್ಲಿ, ಬಾಂಗ್ಲಾದೇಶ ವಿರುದ್ಧದ ಟೆಸ್ಟ್ನಲ್ಲಿ ಹಲವು ದಾಖಲೆಗಳನ್ನು ಮುರಿಯಲಿದ್ದಾರೆ.
ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-0ಯಲ್ಲಿ ಸರಣಿ ಕ್ಲೀನ್ಸ್ವೀಪ್ ಮಾಡಿರುವ ಭಾರತ, ಗುರುವಾರದಿಂದ ಬಾಂಗ್ಲಾದೇಶದ ವಿರುದ್ಧ ಇಂದೋರ್ನಲ್ಲಿ ಮೊದಲ ಟೆಸ್ಟ್ ಪಂದ್ಯವಾಡಲಿದೆ. ಈ ವೇಳೆ ಟೀಂ ಇಂಡಿಯಾ ನಾಯಕ ಕೊಹ್ಲಿ ಎರಡೂ ಇನ್ನಿಂಗ್ಸ್ ಸೇರಿಸಿ 157 ರನ್ ಗಳಿಸಿದರೆ ಟೆಸ್ಟ್ ಕ್ರಿಕೆಟ್ ರನ್ ಗಳಿಕೆಯಲ್ಲಿ ಸೌರವ್ ಗಂಗೂಲಿ ಅವರನ್ನು ಹಿಂದಿಕ್ಕಲಿದ್ದಾರೆ.
ದಾದಾ 113 ಪಂದ್ಯಗಳಲ್ಲಿ 7213 ರನ್ ಗಳಿಸಿದ್ದರೆ, ಕೊಹ್ಲಿ ಕೇವಲ 82 ಪಂದ್ಯಗಳಲ್ಲಿ 7066 ರನ್ ಗಳಿಸಿದ್ದಾರೆ. ಕೊಹ್ಲಿ 157 ರನ್ ಗಳಿಸಿದರೆ ಭಾರತದ ಪರ ಹೆಚ್ಚು ರನ್ ಗಳಿಸಿದ ಪಟ್ಟಿದಲ್ಲಿ 5ನೇ ಸ್ಥಾನಕ್ಕೇರಲಿದ್ದಾರೆ. ಭಾರತದ ಪರ ಸಚಿನ್ ತೆಂಡೂಲ್ಕರ್(15921), ರಾಹುಲ್ ದ್ರಾವಿಡ್(13288), ಸುನೀಲ್ ಗವಾಸ್ಕರ್ (10122), ವಿವಿಎಸ್ ಲಕ್ಷ್ಮಣ್(8718), ವಿರೇಂದ್ರ ಸೆಹ್ವಾಗ್(8586) ಕೊಹ್ಲಿಗಿಂತ ಮುಂದಿದ್ದಾರೆ.
ಇನ್ನು ಈ ಪಂದ್ಯವನ್ನು ಭಾರತ ಗೆದ್ದರೆ ಕೊಹ್ಲಿ ನಾಯಕನಾಗಿ ಹೆಚ್ಚು ಪಂದ್ಯ ಗೆಲ್ಲಿಸಿಕೊಟ್ಟವರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಅಲೆನ್ ಬಾರ್ಡರ್ ಅವರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಲಿದ್ದಾರೆ. ಕೊಹ್ಲಿ 51 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದು, 31ರಲ್ಲಿ ಗೆಲುವು ತಂದುಕೊಟ್ಟಿದ್ದರೆ, ಬಾರ್ಡರ್ 93 ಪಂದ್ಯಗಳಲ್ಲಿ ನಾಯಕನಾಗಿ 32 ಜಯ ತಂದುಕೊಟ್ಟಿದ್ದಾರೆ.