ಕೋಲ್ಕತ್ತಾ: ಭಾರತದ ಕ್ರಿಕೆಟ್ ಕಾಶಿ ಈಡನ್ ಗಾರ್ಡನ್ನಲ್ಲಿ ನಾಳೆಯಿಂದ ಆರಂಭವಾಗಲಿರುವ ಟೀಂ ಇಂಡಿಯಾದ ಚೊಚ್ಚಲ ಅಹರ್ನಿಶಿ ಟೆಸ್ಟ್ ಪಂದ್ಯ ಭಾರತ ಕ್ರಿಕೆಟ್ ಇತಿಹಾಸದಲ್ಲಿ ಒಂದು ಹೆಗ್ಗುರುತಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.
ನಾಳಿನ ಪಂದ್ಯದ ಕುರಿತು ಸುದ್ದಿಗೋಷ್ಠಿ ಯನ್ನ ಉದ್ದೇಶಿಸಿ ಮಾತನಾಡಿದ ಅವರು, ಪಿಂಕ್ ಬಾಲ್ ಟೆಸ್ಟ್ ಪಂದ್ಯ ನಮಗೆ ನೂತನ ಸವಾಲಾಗಿದೆ. ಈ ಪಂದ್ಯಕ್ಕಾಗಿ ನಾವೂ ಕೂಡ ತುಂಬ ಉತ್ಸುಕರಾಗಿದ್ದೇವೆ. ಕಳೆದ ಕೆಲ ವರ್ಷಗಳಿಂದ ಟೆಸ್ಟ್ ಪಂದ್ಯದ ಬೆಳವಣಿಗೆಗಾಗಿ ನಮ್ಮ ಮತ್ತು ಬಿಸಿಸಿಐ ಜೊತೆ ಉತ್ತಮ ಮಾತುಕತೆ ನಡೆದಿದೆ ಎಂದು ತಿಳಿಸಿದ್ದಾರೆ.
ಅಹರ್ನಿಶಿ ಟೆಸ್ಟ್ ಪಂದ್ಯಗಳು 2015ರಲ್ಲಿ ಆರಂಭವಾದರೂ ಭಾರತ ಮಾತ್ರ ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ಪಂದ್ಯವನ್ನ ಆಡುತ್ತಿದೆ. ಅಹರ್ನಿಶಿ ಪಂದ್ಯದ ಮೂಲಕ ಟೆಸ್ಟ್ ಪಂದ್ಯದ ಜನಪ್ರಿಯತೆಯನ್ನ ಹೆಚ್ಚಿಸುವ ಉದ್ದೇಶವನ್ನ ಬಿಸಿಸಿಐ ಹೊಂದಿದೆ.
ಈಗಾಗಲೇ ಭಾರತ-ಬಾಂಗ್ಲಾದೇಶ ತಂಡಗಳ ಆಟಗಾರರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ. ಎರಡು ತಂಡಕ್ಕೂ ಇದು ಚೊಚ್ಚಲ ಪಿಂಕ್ ಬಾಲ್ ಪಂದ್ಯವಾಗಿರುವುದರಿಂದ ಆಟಗಾರರು ಉತ್ಸುಕರಾಗಿದ್ದಾರೆ. ಟೀಂ ಇಂಡಿಯಾದ ಕೆಲ ಆಟಗಾರರು ದೇಶಿಯ ಕ್ರಿಕೆಟ್ನಲ್ಲಿ ಪಿಂಕ್ ಬಾಲ್ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ನಾಳೆ ಮಧ್ಯಾಹ್ನ 1 ಗಟೆಂಗೆ ಆರಂಭವಾಗಲಿರುವ ಅಹರ್ನಿಶಿ ಟೆಸ್ಟ್ ಪಂದ್ಯ ರಾತ್ರಿ 8 ಗಂಟೆಗೆ ಮುಕ್ತಾಯವಾಗಲಿದೆ.