ಮೆಲ್ಬೋರ್ನ್: 2010ರಿಂದ 2019ರವರೆಗೆ ಟೆಸ್ಟ್ ಕ್ರಿಕೆಟ್ನಲ್ಲಿ ಅದ್ಭುತ ಪ್ರದರ್ಶನ ತೋರಿರುವ ವಿವಿಧ ದೇಶಗಳ ಆಟಗಾರರನ್ನು ಸೇರಿಸಿ ತಂಡವೊಂದನ್ನು ಘೋಷಿಸಿದ್ದು, ಅದಕ್ಕೆ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿಯನ್ನ ನಾಯಕನನ್ನಾಗಿ ನೇಮಿಸಲಾಗಿದೆ.
ಅಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯ ಆಡಳಿತಾತ್ಮಕ ವೆಬ್ಸೈಟ್ ಆಗಿರುವ cricket.com.au ಅಧಿಕಾರಿಗಳು ಕಳೆದು ಒಂದು ದಶಕದ ಪ್ರದರ್ಶನ ಆಧರಿಸಿ ದಶಕದ ತಂಡವನ್ನು ಘೋಷಿಸಿದ್ದಾರೆ. ಇದರಲ್ಲಿ ನಾಲ್ವರು ಇಂಗ್ಲೆಂಡ್ ಆಟಗಾರರು, ಮೂವರು ಆಸ್ಟ್ರೇಲಿಯಾ ತಂಡದ ಆಟಗಾರರು, ಇಬ್ಬರು ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲ್ಯಾಂಡ್ ಹಾಗೂ ಭಾರತದ ತಲಾ ಒಬ್ಬರನ್ನು ಆಯ್ಕೆ ಮಾಡಲಾಗಿದೆ.
ವಿರಾಟ್ ಕೊಹ್ಲಿಗೆ 5ನೇ ಕ್ರಮಾಂಕ ಹಾಗೂ ತಂಡದ ನಾಯಕತ್ವವನ್ನು ನೀಡಿದೆ. 6ನೇ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾ ಎಬಿ ಡಿ ವಿಲಿಯರ್ಸ್, 7ನೇ ಕ್ರಮಾಂಕದಲ್ಲಿ ಏಕೈಕ ಆಲ್ರೌಂಡರ್ ಆಗಿ ಇಂಗ್ಲೆಂಡ್ ಬೆನ್ಸ್ಟೋಕ್ಸ್ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಬೌಲಿಂಗ್ ವಿಭಾಗದಲ್ಲಿ ಮೂವರು ವೇಗಿಗಳು ಹಾಗೂ ಒಬ್ಬ ಸ್ಪಿನ್ನರ್ಅನ್ನು ಆಯ್ಕೆ ಮಾಡಲಾಗಿದ್ದು, ಇಂಗ್ಲೆಂಡ್ನ ಜೇಮ್ಸ್ ಆ್ಯಂಡರ್ಸನ್, ಸ್ಟುವರ್ಟ್ ಬ್ರಾಡ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ ಇದ್ದರೆ, ಆಸ್ಟ್ರೇಲಿಯಾದ ನಥನ್ ಲಿಯಾನ್ ಸ್ಪಿನ್ನರ್ ವಿಭಾಗದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 12ನೇ ಆಟಗಾರನಾಗಿ ದಕ್ಷಿಣ ಆಫ್ರಿಕಾದ ವೆರ್ನಾನ್ ಫಿಲಾಂಡರ್ರನ್ನು ಆಯ್ಕೆ ಮಾಡಲಾಗಿದೆ.