ರಾಜ್ಕೋಟ್ (ಗುಜರಾತ್): ಪ್ರತಿ ಪಂದ್ಯದಲ್ಲೂ ಒಂದಲ್ಲ ಒಂದು ದಾಖಲೆ ಬರೆಯುತ್ತಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ಇಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ದಾಖಲೆಗಳನ್ನು ತಮ್ಮ ಖಾತೆಗೆ ಹಾಕಿಕೊಳ್ಳಲಿದ್ದಾರೆ.
ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಮಾದರಿ ಒಳಗೊಂಡಂತೆ ನಾಯಕನಾಗಿ ಹೆಚ್ಚು ಶತಕ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದು ವಿಶ್ವದಾಖಲೆ ಮಾಡಲಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಟಿಂಗ್ ಅವರ ಶತಕಗಳ ದಾಖಲೆಯನ್ನು ಮುರಿಯಲಿದ್ದಾರೆ. ಪ್ರಸ್ತುತ ಈ ಪಟ್ಟಿಯಲ್ಲಿ ಕಿಂಗ್ ಕೊಹ್ಲಿ ಹಾಗೂ ಪಾಂಟಿಂಗ್ ತಲಾ 41 ಶತಕಗಳನ್ನು ಬಾರಿಸಿ ಅಗ್ರಸ್ಥಾನವನ್ನು ಸಮನಾಗಿ ಹಂಚಿಕೊಂಡಿದ್ದಾರೆ.
ಕಿಂಗ್ ಕೊಹ್ಲಿ ಆರು ವರ್ಷಗಳಲ್ಲಿ ಕೇವಲ 169 ಪಂದ್ಯಗಳಲ್ಲಿ 41 ಶತಕ ಬಾರಿಸಿದರೆ, ಇಷ್ಟೇ ಶತಕಗಳನ್ನು ಬಾರಿಸಲು ಪಾಟಿಂಗ್ 324 ಪಂದ್ಯಗಳನ್ನು ಆಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಎಲ್ಲಾ ಮಾದರಿ) ಅತಿ ಹೆಚ್ಚು ಶತಕ ಬಾರಿಸಿದ ನಾಯಕರು
ಕ್ರ.ಸಂ | ಆಟಗಾರ | ದೇಶ | ಪಂದ್ಯ | ರನ್ | ಶತಕಗಳು |
1. | ವಿರಾಟ್ ಕೊಹ್ಲಿ | ಭಾರತ | 169 | 11,025 | 41 |
2. | ರಿಕಿ ಪಾಂಟಿಂಗ್ | ಆಸ್ಟ್ರೇಲಿಯಾ | 324 | 15,440 | 41 |
3. | ಗ್ರೇಮ್ ಸ್ಮಿತ್ | ದಕ್ಷಿಣ ಆಫ್ರಿಕಾ | 286 | 14,878 | 33 |
4. | ಸ್ಟೀವ್ ಸ್ಮಿತ್ | ಆಸ್ಟ್ರೇಲಿಯಾ | 93 | 5,885 | 20 |
5. | ಮೈಕಲ್ ಕ್ಲಾರ್ಕ್ | ಆಸ್ಟ್ರೇಲಿಯಾ | 139 | 7,060 | 19 |
6. | ಬ್ರಿಯಾನ್‌ಲಾರಾ | ವೆಸ್ಟ್ ಇಂಡೀಸ್ | 172 | 8,410 | 19 |
ಕ್ರಿಕೆಟ್ ದೇವರ ದಾಖಲೆ ಅಳಿಸಲು ಬೇಕಿದೆ ಒಂದು ಶತಕ:
ತವರಿನಲ್ಲಿ ಒಂದು ಶತಕ ಬಾರಿಸಿದರೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿರುವ ಶತಕಗಳ ದಾಖಲೆಯನ್ನೂ ಕೊಹ್ಲಿ ಅಳಿಸಿ ಹಾಕಲಿದ್ದಾರೆ. ಸಚಿನ್ ಭಾರತದಲ್ಲಿ 20 ಏಕದಿನ ಶತಕಗಳನ್ನು ಸಿಡಿಸಿದ್ದಾರೆ. ಈಗಾಗಲೇ ನಾಯಕ ಕೊಹ್ಲಿ 19 ಶತಕಗಳನ್ನು ಬಾರಿಸಿದ್ದಾರೆ. ಒಂದು ಶತಕ ಬಾರಿಸಿ ದಾಖಲೆ ಬರೆಯಲು ಸಜ್ಜಾಗಿದ್ದಾರೆ. ಅಷ್ಟೇ ಅಲ್ಲದೆ, ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸಚಿನ್ ಒಟ್ಟು 9 ಶತಕ ಬಾರಿಸಿದ್ದಾರೆ. ಈಗಾಗಲೇ ಕೊಹ್ಲಿ 8 ಶತಕ ಬಾರಿಸಿದ್ದಾರೆ. ಇದರಿಂದ ಒಂದು ಶತಕ ಬಾರಿಸಿದ್ರೆ ಎರಡೆರಡು ದಾಖಲೆಗಳನ್ನು ಸೃಷ್ಟಿಯಾಗಲಿವೆ.
ಆಸ್ಟ್ರೇಲಿಯಾ ವಿರುದ್ಧ ಏಕದಿನ ಪಂದ್ಯದಲ್ಲಿ 8 ಶತಕ ಮತ್ತು 6 ಅರ್ಧ ಶತಕಗಳನ್ನು ಕೊಹ್ಲಿ ಬಾರಿಸಿದ್ದಾರೆ. ಈ ಮೂಲಕ 14 ಬಾರಿ ಆಸ್ಟ್ರೇಲಿಯಾ ವಿರುದ್ಧ 50ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಭಾರತದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಆ್ಯಡಮ್ ಜಂಪಾ ಬೌಲಿಂಗ್ನಲ್ಲಿ ಕೊಹ್ಲಿ ಇಲ್ಲಿಯವರೆಗೂ 4 ಬಾರಿ ಔಟ್ ಆಗಿದ್ದಾರೆ. ಕೊಹ್ಲಿಯನ್ನು ಹೆಚ್ಚು ಬಾರಿ ಔಟ್ ಮಾಡಿದ ಸ್ಪಿನ್ನರ್‌ಗಳಲ್ಲಿ ಜಂಪಾಗೆ ಅಗ್ರಸ್ಥಾನ ದೊರೆತಿದೆ.