ದೆಹಲಿ: ಮುಂಬೈ ತಂಡದ ನಾಯಕ ಪೃಥ್ವಿ ಶಾ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಪ್ರಸ್ತುತ ಟೀಮ್ ಇಂಡಿಯಾ ತಂಡದ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದ್ದ ದಾಖಲೆ ಅಳಿಸಿ ಹಾಕಿ, ಹೊಸ ದಾಖಲೆ ಬರೆದಿದ್ದಾರೆ.
ಲಿಸ್ಟ್ ಎ ಪಂದ್ಯಗಳಲ್ಲಿ ಚೇಸಿಂಗ್ ವೇಳೆ ವೈಯಕ್ತಿಕ ಗರಿಷ್ಠ ರನ್ ಬಾರಿಸಿದ ಭಾರತಿಯ ಆಟಗಾರ ಎಂಬ ಹೆಗ್ಗಳಿಕೆ ಪೃಥ್ವಿ ಶಾ ಭಾಜನರಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಸೌರಾಷ್ಟ್ರ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ 123 ಎಸೆತಗಳಲ್ಲಿ ಅಜೇಯ 185 ರನ್ ಗಳಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಈ ಮೊದಲು 2005 ರಲ್ಲಿ ಜೈಪುರದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಧೋನಿ ಅಜೇಯ 183 ರನ್ ಗಳಿಸಿದ್ದರೆ, 2012 ರಲ್ಲಿ ಢಾಕಾದಲ್ಲಿ ನಡೆದ ಏಷ್ಯಾಕಪ್ ನಲ್ಲಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 183 ರನ್ ಗಳಿಸಿದ್ದರು.
ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಪೃಥ್ವಿ ಶಾ ಧೋನಿ ಮತ್ತು ಕೊಹ್ಲಿ ಅವರ ದಾಖಲೆ ಬರೆದಿದ್ದಾರೆ.
ನಾಯಕ ಪೃಥ್ವಿ ಶಾ ಸಿಡಿಸಿದ ಅಬ್ಬರ ಶತಕದ ನೆರವಿನಿಂದ ವಿಜಯ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಸೌರಾಷ್ಟ್ರದ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.
ದೆಹಲಿಯ ಏರ್ಫೋರ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ನೀಡಿದ್ದ 285 ರನ್ಗಳ ಗುರಿಯನ್ನು ಮುಂಬೈ ತಂಡ ಕೇವಲ 41.5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.
ಓದಿ : ಭಾರತ -ಇಂಗ್ಲೆಂಡ್ ಟಿ-20 ಸರಣಿ: ಹಾರ್ದಿಕ್ ಫಿಟ್.. ಟಿ. ನಟರಾಜನ್ ಔಟ್
ನಾಯಕ ಪೃಥ್ವಿ ಶಾ ಕೇವಲ 123 ಎಸೆತಗಳಲ್ಲಿ 21 ಬೌಂಡರಿ 7 ಸಿಕ್ಸರ್ಗಳ ಸಹಿತ ಅಜೇಯ 185 ರನ್ ಸಿಡಿಸಿದರು. ಅಲ್ಲದೇ ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಜೊತೆಗೆ ಮೊದಲ ವಿಕೆಟ್ಗೆ ಬರೋಬ್ಬರಿ 238 ರನ್ಗಳ ಜೊತೆಯಾಟ ನೀಡಿದರು.
ಜೈಸ್ವಾಲ್ 104 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್ ಸಹಿತ 75 ರನ್ಗಳಿಸಿದರು. ಆದಿತ್ಯ ತಾರೆ 24 ಎಸೆತಗಳಲ್ಲಿ ಅಜೇಯ 20 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಸೌರಾಷ್ಟ್ರ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 284 ರನ್ಗಳಿಸಿತ್ತು. ಸಮರ್ಥ್ ವ್ಯಾಸ್ ಅಜೇಯ 90, ಚಿರಾಗ್ ಜನಿ ಅಜೇಯ 53, ವಿಶ್ವರಾಜ್ ಜಡೇಜಾ 53 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.