ದೆಹಲಿ: ನಾಯಕ ಪೃಥ್ವಿ ಶಾ ಸಿಡಿಸಿದ ಅಬ್ಬರ ಶತಕದ ನೆರವಿನಿಂದ ವಿಜಯ ಹಜಾರೆ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಸೌರಾಷ್ಟ್ರದ ವಿರುದ್ಧ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ ಸೆಮಿಫೈನಲ್ ಪ್ರವೇಶಿಸಿದೆ.
ದೆಹಲಿಯ ಏರ್ಫೋರ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ನಾಲ್ಕನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸೌರಾಷ್ಟ್ರ ನೀಡಿದ್ದ 285ರನ್ಗಳ ಗುರಿಯನ್ನು ಮುಂಬೈ ತಂಡ ಕೇವಲ 41.5 ಓವರ್ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.
ನಾಯಕ ಪೃಥ್ವಿ ಶಾ ಕೇವಲ 123 ಎಸೆತಗಳಲ್ಲಿ 21 ಬೌಂಡರಿ 7 ಸಿಕ್ಸರ್ಗಳ ಸಹಿತ ಅಜೇಯ 185 ರನ್ ಸಿಡಿಸಿದರು. ಅಲ್ಲದೇ ಯುವ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಜೊತೆಗೆ ಮೊದಲ ವಿಕೆಟ್ಗೆ ಬರೋಬ್ಬರಿ 238 ರನ್ಗಳ ಜೊತೆಯಾಟ ನೀಡಿದರು. ಜೈಶ್ವಾಲ್ 104 ಎಸೆತಗಳಲ್ಲಿ 10 ಬೌಂಡರಿ 1 ಸಿಕ್ಸರ್‌ಸಹಿತ 75 ರನ್ಗಳಿಸಿದರು. ಆದಿತ್ಯ ತಾರೆ 24 ಎಸೆತಗಳಲ್ಲಿ ಅಜೇಯ 20 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು.
ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಸೌರಾಷ್ಟ್ರ 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 284 ರನ್ಗಳಿಸಿತ್ತು. ಸಮರ್ಥ್ ವ್ಯಾಸ್ ಅಜೇಯ 90, ಚಿರಾಗ್ ಜನಿ ಅಜೇಯ 53, ವಿಶ್ವರಾಜ್ ಜಡೇಜಾ 53 ರನ್ಗಳಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾಗಿದ್ದರು.
ಇದನ್ನೂ ಓದಿ: ಮಂದಾನ ಸ್ಫೋಟಕ ಅರ್ಧಶತಕ: ದ.ಆಫ್ರಿಕಾ ವನಿತೆಯ ವಿರುದ್ಧ ಭಾರತಕ್ಕೆ ಜಯ