ಚೆನ್ನೈ: ಇಂಗ್ಲೆಂಡ್ ತಂಡದ ರೊಟೇಶನ್ ನಿಯಮ ಚರ್ಚೆಗೆ ಗುರಿಯಾಗುತ್ತಿದ್ದರೂ ತಮ್ಮ ತಂಡದ ಆಟಗಾರರಿಗೆ ಐಪಿಎಲ್ನಲ್ಲಿ ಆಡಬೇಡಿ ಎಂದು ಹೇಳುವುದು ತುಂಬಾ ಕಷ್ಟದ ಕೆಲಸ ಎಂದು ಇಂಗ್ಲೆಂಡ್ ಕೋಚ್ ಕ್ರಿಸ್ ಸಿಲ್ವರ್‌ವುಡ್ ಬುಧವಾರ ಹೇಳಿದ್ದಾರೆ.
ಮೂರು ಮಾದರಿಯ ಕ್ರಿಕೆಟ್ ಆಡುವ ಆಟಗಾರರಾದ ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜಾನಿ ಬೈರ್ಸ್ಟೋವ್, ಮೋಯಿನ್ ಅಲಿ ಅಂತಹ ಆಟಗಾರರನ್ನು ಭಾರತ ಮತ್ತು ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿ ವೇಳೆ ರೊಟೇಶನ್ ಮಾಡಲಾಗಿದೆ. ಸ್ಟೋಕ್ಸ್, ಆರ್ಚರ್ ಇಂಗ್ಲೆಂಡ್ ಸರಣಿಯಿಂದ ಹೊರಗುಳಿದರೆ, ಬೈರ್ಸ್ಟೋವ್ ಮೊದಲೆರಡು ಟೆಸ್ಟ್ನಿಂದ ಹಾಗೂ ಮೋಯಿನ್ ಕೊನೆಯೆರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದರು.
" ನೀವು ಐಪಿಎಲ್ ಆಡಲು ಸಾಧ್ಯವಿಲ್ಲ ಎಂದು ಆಟಗಾರರಿಗೆ ಹೇಳುವುದು ತುಂಬಾ ಕಷ್ಟ. ಐಪಿಎಲ್ ಟಿ-20 ಜಗತ್ತಿನಲ್ಲಿ ಬಹುದೊಡ್ಡ ಕ್ರಿಕೆಟ್ ಟೂರ್ನಿಯಾಗಿದೆ. ಆದ್ದರಿಂದ ನೀವು ಆಡಬಾರದು ಎಂದು ಹೇಳುವುದು ತುಂಬಾ ಕಷ್ಟ" ಎಂದು ಸಿಲ್ವರ್‌ವುಡ್ 3ನೇ ಟೆಸ್ಟ್ಗೂ ಮುನ್ನ ನಡೆದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ.
ಈ ಹಿಂದೆ ಆಸ್ಟ್ರೇಲಿಯಾದ ಬಿಗ್ಬ್ಯಾಶ್ನಿಂದ ಹೊರಗುಳಿದಿದ್ದ ಇಂಗ್ಲೆಂಡ್ ಆಟಗಾರರು ಇದೀಗ ಐಪಿಎಲ್ನಲ್ಲಿ ಆಡುವುದಕ್ಕೆ ಆದ್ಯತೆ ನೀಡುತ್ತಿದ್ದಾರೆಯೇ ಎಂದು ಕೇಳಿದಾಗ, ಸಿಲ್ವರ್‌ವುಡ್ ತಮ್ಮ ಆಟಗಾರರು ರೋಟೇಶನ್ ಪಾಲಿಸಿಯನ್ನು ಪಾಲಿಸುವುದಕ್ಕೆ ಟೆಸ್ಟ್ ಪಂದ್ಯಗಳನ್ನು ಬಿಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
" ಇದು ಒಂದು ಸಮಸ್ಯೆಯೆಂದು ನಾನು ಭಾವಿಸುವುದಿಲ್ಲ, ಏಕೆಂದರೆ ನಮ್ಮ ಆಟಗಾರರು ಐಪಿಎಲ್ನಲ್ಲಿ ಉನ್ನತ ಮಟ್ಟದ ಟಿ-20 ಕ್ರಿಕೆಟ್ ಆಡಲಿದ್ದಾರೆ, ಅದು ನಮಗೆ ನಿಜವಾಗಿಯೂ ಪ್ರಯೋಜನವನ್ನು ನೀಡುತ್ತದೆ. ನಿಸ್ಸಂಶಯವಾಗಿ, ಆಟಗಾರರು ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರ ಮನಸ್ಸು ಕೂಡ ಉತ್ತಮವಾಗಿ ರೂಪುಗೊಳ್ಳುತ್ತದೆ. ಅವರ ಆಟದಿಂದ ನಾವು ಪ್ರಯೋಜನ ಪಡೆಯುತ್ತೇವೆ" ಎಂದು ಅವರು ತಿಳಿಸಿದ್ದಾರೆ.
ಇದನ್ನು ಓದಿ: 2021ರ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆಯಿಂದ ಹೊರಗುಳಿದ ಮಾರ್ಕ್ವುಡ್