ಕೋಲ್ಕತ್ತಾ: ಭಾರತದ ಸ್ಟಾರ್ ವೇಗಿ ಮೊಹಮ್ಮದ್ ಶಮಿ ತಮ್ಮ ಬಾಲ್ಯದಲ್ಲಿದ್ದಾಗ ಜಾಹೀರ್ ಖಾನ್ ಹಾಗೂ ಪಾಕಿಸ್ತಾನದ ಸ್ಟಾರ್ ಬೌಲರ್ ವಾಸಿಮ್ ಅಕ್ರಮ್ ಅವರ ಬೌಲಿಂಗ್ ನೋಡಿಕೊಂಡು ಬೆಳೆದಿದ್ದಾಗಿ ಸ್ಮರಿಸಿದ್ದು, ಅವರ ಜೊತೆ ಕೆಲ ಸಮಯ ಕಳೆದಿದ್ದು ತಮ್ಮ ಬೌಲಿಂಗ್ ಬದಲಾವಣೆಗೆ ಕಾರಣ ಎಂದು ತಿಳಿಸಿದ್ದಾರೆ,
ಶಮಿ, ಮನೋಜ್ ತಿವಾರಿಯೊಂದಿಗೆ ನಡೆಸಿದ ಇನ್ಸ್ಟಾಗ್ರಾಮ್ ಲೈವ್ನಲ್ಲಿ ಈ ವಿಚಾರವನ್ನು ತಿಳಿಸಿದ್ದಾರೆ. ತಮ್ಮ ಬೌಲಿಂಗ್ ವೃತ್ತಿಜೀವನವನ್ನು ರೂಪಿಸುವಲ್ಲಿ ಜಾಹೀರ್ ಖಾನ್ ಮತ್ತು ವಾಸಿಮ್ ಅಕ್ರಮ್ ಯಾವ ಪಾತ್ರವನ್ನು ವಹಿಸಿದ್ದಾರೆ ಎಂಬುದನ್ನು ಶಮಿ ಬಹಿರಂಗಪಡಿಸಿದ್ದಾರೆ. ಅಲ್ಲದೆ ಭಾರತದ ಸ್ಟಾರ್ ಆರಂಭಿಕ ಬ್ಯಾಟ್ಸ್ಮನ್ಗಳಾದ ಸಚಿನ್ ಹಾಗೂ ಸೆಹ್ವಾಗ್ ಕೂಡ ತಮ್ಮ ಮೇಲೆ ಪ್ರಭಾವ ಬೀರಿದ್ದರು ಎಂದು ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯಗಳನ್ನು ನೋಡುತ್ತಾ ಬೆಳೆದೆ. ಆ ವೇಳೆ ಸಚಿನ್ ತೆಂಡೂಲ್ಕರ್ ಅಂತಹ ಅದ್ಭುತ ಆಟಗಾರರ ಆಟವನ್ನು ನೋಡಿದ್ದೇನೆ. ಆ ಸಂದರ್ಭದಲ್ಲಿ ಸೆಹ್ವಾಗ್- ಸಚಿನ್ ನಾನು ನೋಡಿದ ಅತ್ಯುತ್ತಮ ಬ್ಯಾಟಿಂಗ್ ಜೋಡಿಯಾಗಿತ್ತು ಎಂದಿದ್ದಾರೆ.
ಇನ್ನು ಕೆಕೆಆರ್ ಪರ ಆಡುವ ಸಂದರ್ಭದಲ್ಲಿ ಬೌಲಿಂಗ್ ಕೋಚ್ ಆಗಿದ್ದ ವಾಸಿಮ್ ಅಕ್ರಮ್ ಅವರ ಜೊತೆ ಸಮಯ ಕಳೆದಿದ್ದು, ಅವರಿಂದ ಸಾಕಷ್ಟು ಕಲಿಯಲು ನನಗೆ ಅವಕಾಶ ಸಿಕ್ಕಿತ್ತು. ಅವರನ್ನು ಟಿವಿಯಲ್ಲಿ ಮಾತ್ರ ನೋಡಿದ್ದ ನನಗೆ ಆ ಸಮಯದಲ್ಲಿ ತೀರ ಹತ್ತಿರದಿಂದ ಭೇಟಿ ಮಾಡಿ ಬೌಲಿಂಗ್ ಸ್ಕಿಲ್ ಮತ್ತು ಮೌಲ್ಯಯುತ ಸಲಹೆಗಳನ್ನು ಪಡೆದಿದ್ದೆ. ಆ ಸಮಯನ್ನು ನಾನು ಬಹಳ ಎಂಜಾಯ್ ಮಾಡಿದ್ದೆ ಎಂದು ಶಮಿ ವಿವರಿಸಿದ್ದಾರೆ.
ಇನ್ನು ಜಾಹೀರ್ ಖಾನ್ ಹೆಚ್ಚು ಕಾಲ ಆಡುವ ಅವಕಾಶ ಸಿಕ್ಕಿಲ್ಲ. ಆದರೂ ಅವರ ಜೊತೆ ಒಟ್ಟಿಗೆ ಐಪಿಎಲ್ನಲ್ಲಿ ಆಡುವ ಅವಕಾಶ ಕೆಲವು ದಿನಗಳ ಕಾಲ ಸಿಕ್ಕಿತ್ತು. ಅವರ ಜೊತೆ ಯಾವಾಗ ಮಾತನಾಡಿದರೂ ನನಗೆ ತುಂಬಾ ಸೂಕ್ತ ಸಲಹೆ ದೊರೆಯುತ್ತಿತ್ತು. ಡೆಲ್ಲಿ ಕ್ಯಾಪಿಟಲ್ ಪರ ಆಡುವ ವೇಳೆ ಅನುಭವಿಯಾಗಿರುವ ಜಾಹೀರ್ ಭಾಯ್ ಅವರಿಂದ ತುಂಬಾ ಕಲಿತೆ. ಹೊಸ ಬಾಲ್ನಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂಬುದನ್ನು ಅವರಿಂದ ಕಲಿಯಲು ಬಯಸುತ್ತಿದ್ದೆ ಎಂದು ತಿಳಿಸಿದ್ದಾರೆ.