ನವದೆಹಲಿ: ಭಾರತದ ಮಾಜಿ ಕ್ರಿಕೆಟಿಗ ಹಾಗೂ ಜಮ್ಮು ಕಾಶ್ಮೀರ ತಂಡದ ಸಲಹೆಗಾರ ಇರ್ಫಾನ್ ಪಠಾಣ್ ಜಮ್ಮು- ಕಾಶ್ಮೀರದ ಆಟಗಾರರ ಸಂಪರ್ಕಕ್ಕೆ ಟಿವಿ ಜಾಹೀರಾತು ಮೊರೆ ಹೋಗಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ನೀಡಿದ್ದ 370 ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಮೇಲೆ ಅಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಭದ್ರತೆ ದೃಷ್ಟಿಯಿಂದ ಕಾಶ್ಮೀರದಲ್ಲಿ ಮೊಬೈಲ್ ನೆಟ್‌ವರ್ಕ್ ಮೇಲೆ ನಿರ್ಬಂಧ ಹೇರಲಾಗಿರುವುದರಿಂದ ಮುಂಬರುವ ವಿಜಯ್ ಹಜಾರೆ ಟ್ರೋಫಿ ತರಬೇತಿ ಕ್ಯಾಂಪ್ಗೆ ಜಮ್ಮು-ಕಾಶ್ಮೀರ ತಂಡದ ಆಟಗಾರರನ್ನು ಒಂದುಗೂಡಿಸಲಾಗದೇ ಪಠಾಣ್ ಪರದಾಡುತ್ತಿದ್ದಾರೆ.
ಇದೇ ಕಾರಣದಿಂದ ಈಗಾಗಲೇ ಅಂಡರ್-23 ವಿಝ್ಝಿ ಟ್ರೋಫಿಯಿಂದ ಜಮ್ಮು-ಕಾಶ್ಮೀರ ತಂಡ ಹಿಂದೆ ಸರಿದಿತ್ತು. ಆದರೆ, ಮುಂದಿನ ತಿಂಗಳು ಆರಂಭಗೊಳ್ಳಲಿರುವ ವಿಜಯ್ ಹಜಾರೆ ಏಕದಿನ ಟೂರ್ನಿಗೆ ಆರಂಭಗೊಳ್ಳಲಿದ್ದು, ತರಬೇತಿ ಶಿಬಿರ ಆರಂಭಿಸಲು ಆಟಗಾರರೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಡಳಿತ ಮಂಡಳಿ ಸ್ಥಳೀಯ ಟಿವಿ ವಾಹಿನಿಗಳಲ್ಲಿ ಆಟಗಾರರು, ಕ್ರಿಕೆಟ್ ಸಂಸ್ಥೆ ಸಂಪರ್ಕಿಸಿ ಶಿಬಿರಕ್ಕೆ ಹಾಜರಾಗುವಂತೆ ಜಾಹೀರಾತು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಪಠಾಣ್, ನನ್ನ ವೃತ್ತಿ ಜೀವನದಲ್ಲೇ ಇದೊಂದು ಸವಾಲಿನ ಕೆಲಸವಾಗಿದೆ. ಜಮ್ಮುವಿನ ಬಹುತೇಕ ಆಟಗಾರರು ನನ್ನ ಸಂಪರ್ಕದಲ್ಲಿದ್ದಾರೆ. ಆದರೆ, ಕಾಶ್ಮೀರ ಆಟಗಾರರು ಸಂಪರ್ಕ ಮಾಡಲಾಗುತ್ತಿಲ್ಲ. ಮುಂದಿನ ತಿಂಗಳು ವಿಜಯ್ ಹಜಾರೆ ಟ್ರೋಫಿ ಆರಂಭವಾಗಲಿದ್ದು, ಈ ತಿಂಗಳು ತರಬೇತಿ ಶಿಬಿರಕ್ಕೆ ಆಟಗಾರರನ್ನು ಕರೆತರುವುದು ಅನಿವಾರ್ಯವಾಗಿದೆ. ಆದ್ದರಿಂದ ಟಿವಿ ಜಾಹೀರಾತು ನೀಡಿದ್ದೇವೆ ಎಂದಿದ್ದಾರೆ.