ಮುಂಬೈ: ಎಂಎಸ್ ಧೋನಿ ಎಂದರೆ ಮೊದಲಿಗೆ ಬರೋದೇ ಅವರ ಗೇಮ್ ಫಿನಿಸಿಂಗ್. ಆದರೆ ಅಷ್ಟೇ ಮಹತ್ವ ಅವರ ನಾಯಕತ್ವದಲ್ಲಿ ಇತ್ತು. ಅವರ ಚಾಣಾಕ್ಷ ನಾಯಕತ್ವದಿಂದಲೇ ಕೆಲವು ಮಹತ್ವದ ಟೂರ್ನಿಗಳು ಭಾರತದ ಪಾಲಾದವು ಎನ್ನುವುದರಲ್ಲಿ ಎರಡು ಮಾತಿಲ್ಲ. ಧೋನಿ ನಾಯಕತ್ವದಲ್ಲಿ ಭಾರತ ತಂಡ ಅನೇಕ ದಿಗ್ವಿಜಯಗಳನ್ನು ಸಾಧಿಸಿದೆ.
ಶನಿವಾರ ಮಹೇಂದ್ರ ಸಿಂಗ್ ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ಘೋಷಣೆ ಮಾಡಿದ್ದರು. ಇನ್ಸ್ಟಾಗ್ರಾಮ್ನಲ್ಲಿ ತಮ್ಮ 16 ವರ್ಷಗಳ ವೃತ್ತಿ ಜೀವನದ ಪಯಣವನ್ನು ನೆನಪಿಸುವ ಒಂದು ವಿಡಿಯೋ ಮೂಲಕ ನಿವೃತ್ತಿ ಖಚಿತಪಡಿಸಿದ್ದರು.
ಧೋನಿ ಕ್ರಿಕೆಟ್ನಿಂದ ಮರೆಯಾಗುತ್ತಿರಬಹುದು ಆದರೆ ಕ್ರಿಕೆಟ್ನಲ್ಲಿ ಅವರ ಸಾಧನೆ , ನಾಯಕತ್ವದ ತಂತ್ರಗಾರಿಕೆ ಮಾತ್ರ ಎಂದಿಗೂ ಅಭಿಮಾನಿಗಳು ಮರೆಯಾರರು. ಧೋನಿ ನಾಯಕತ್ವದಲ್ಲಿ 149 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡವನ್ನು ಅವರ ನೆಲದಲ್ಲೇ ಕ್ಲೀನ್ ಸ್ವೀಪ್ ಸಾಧಿಸಿದ ಕೀರ್ತಿ ಧೋನಿ ನಾಯಕತ್ವಕ್ಕೆ ಸಲ್ಲುತ್ತದೆ.ಅಲ್ಲದೆ ಐಸಿಸಿ ಆಯೋಜಿಸುವ ಎಲ್ಲ ಟ್ರೋಫಿಗಳನ್ನು ಭಾರತಕ್ಕೆ ತಂದುಕೊಟ್ಟ ಶ್ರೇಯ ಹಾಗೂ ಟೆಸ್ಟ್ ಕ್ರಿಕೆಟ್ನಲ್ಲಿ ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿಸಿದರಲ್ಲದೇ, ನಂಬರ್ ಒನ್ ಸ್ಥಾನಕ್ಕೆ ಕೊಂಡೊಯ್ದ ಕೀರ್ತಿ ರಾಂಚಿ ಕ್ರಿಕೆಟಿಗನಿಗೆ ಸಲ್ಲುತ್ತದೆ.
ಭಾರತ ಕ್ರಿಕೆಟ್ನಲ್ಲಿ ನಾಯಕನಾಗಿ ಅವರು ತೆಗೆದುಕೊಂಡ ಪ್ರಮುಖ 5 ನಿರ್ಧಾರಗಳ ಹೇಗಿದ್ದವು, ಅವು ಹೇಗೆ ಪಂದ್ಯದ ಗತಿಯನ್ನು ಬದಲಿಸಿದವು ಎಂದು ತಿಳಿದುಕೊಳ್ಳೋಣ
2007 ರವಿಶ್ವಕಪ್ನಲ್ಲಿ ಜೋಗಿಂದರ್ ಶರ್ಮಾಗೆ ಕೊನೆಯ ಓವರ್
ಟಿ-20 ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಫೈನಲ್ ಪ್ರವೇಶಿಸಿತ್ತು. ಚೊಚ್ಚಲ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಸಾಂಪ್ರದಾಯಿಕ ಎದುರಾಳಿಯಾದ ಪಾಕಿಸ್ತಾನ ಎದುರಾಗಿತ್ತು. ಭಾರತ ನೀಡಿದ್ದ ಗುರಿಯನ್ನು ಬೆನ್ನೆತ್ತಿದ್ದ ಪಾಕ್ ತಂಡಕ್ಕೆ. ಅಂತಿಮ ಓವರ್‌ನಲ್ಲಿ ಪಾಕಿಸ್ತಾನಕ್ಕೆ 13 ರನ್‌ಗಳ ಅವಶ್ಯಕತೆಯಿತ್ತು. ಪಾಕ್ ಆ ವೇಳೆಗಾಗಲೇ ತನ್ನ 9 ವಿಕೆಟ್ ಕಳೆದುಕೊಂಡಿತ್ತಾದರೂ ಪಾಕಿಸ್ತಾನ ತಂಡದ ನಾಯಕ ಮಿಸ್ಬಾ ಉಲ್ ಹಕ್ ಕ್ರೀಸ್‌ನಲ್ಲಿದ್ದರು.
ಧೋನಿ ಮುಂದೆ ಭಜ್ಜಿಯಂತಹ ಅನುಭವಿಯ ಆಯ್ಕೆಗಳಿದ್ದರೂ ಅವರು ಅನನುಭವಿ ಜೋಗಿಂದರ್ ಶರ್ಮಾಗೆ ಬೌಲಿಂಗ್ ನೀಡಿದ್ದರು. ಮೊದಲೆರಡು ಎಸೆತದಲ್ಲಿ ಸಿಕ್ಸರ್, ವೈಡ್ ನೀಡಿದ್ದ ಶರ್ಮಾ ನಂತರದ ಎಸೆತದಲ್ಲಿ ಮಿಸ್ಬಾ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಭಾರತ ವಿಶ್ವಕಪ್ ಚಾಂಪಿಯನ್ ಆಗಿ ಹೊರ ಹೊಮ್ಮಿತು.
2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ನಲ್ಲಿ ಬೌಲರ್ಗಳಿಗೆ ನೀಡಿದ ಸೂಚನೆ
ಧೋನಿ ನಾಯಕನಾಗಿ ಆಯ್ಕೆಯಾಗಿದ್ದ 3ನೇ ಟೆಸ್ಟ್ನಲ್ಲಿ ತೆಗೆದುಕೊಂಡ ಆ ಒಂದು ನಿರ್ಧಾರದಿಂದ ಧೋನಿ ಬಹಳಷ್ಟು ಟೀಕೆಗೆ ಗುರಿಯಾದರು, ಆದರೆ ಅದರ ಫಲಿತಾಂಶ ಧೋನಿ ಪರವೇ ಬಂದಿತ್ತು.2008ರ ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಭಾರತ ಮೊದಲ ಮೂರು ಟೆಸ್ಟ್ಗಳಲ್ಲಿ ಒಂದು ಟೆಸ್ಟ್ ಗೆದ್ದು, ಎರಡರಲ್ಲಿ ಡ್ರಾ ಸಾಧಿಸಿ ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು. ಅಂತಿಮ ಟೆಸ್ಟ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ 441 ರನ್ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ನಡೆಸಿದ್ದ ಆಸ್ಟ್ರೇಲಿಯಾ ಎರಡನೇ ದಿನದಂತ್ಯಕ್ಕೆ 3.9 ರನ್ರೇಟ್ನಲ್ಲಿ 189 ಕ್ಕೆ 2 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು.
ಮೂರನೇ ದಿನ ಧೋನಿ ಬೌಲರ್ಗಳಿಗೆ, ಔಟ್ಸೈಡ್ನಿಂದ ಬೌಲಿಂಗ್ ಮಾಡಲು ಸೂಚನೆ ನೀಡುತ್ತಿದ್ದರು. ಈ ನಿರ್ಧಾರದಿಂದ ಬ್ಯಾಟ್ಸ್ಮನ್ಗಳಿಗೆ ಅಟ್ಯಾಕ್ ಮಾಡಲು ಸುಲಭವಾಗುತ್ತಿದೆ ಎಂದು ಕಾಮೆಂಟೇಟರ್ಗಳು ದೂರಿದ್ದಲ್ಲದೇ, ಡ್ರಾ ಸಾಧಿಸಿ ಸರಣಿ ಗೆಲ್ಲುವುದನ್ನು ಬಿಟ್ಟು ಕೆಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಧೋನಿ ಟೀಕಿಸಿದ್ದರು.ಆದರೆ, ಎಲ್ಲರ ಆಲೋಚನೆ ತಲೆಕೆಳಗಾಗಿತ್ತು. ಆಸ್ಟ್ರೇಲಿಯ ಹಿಂದಿನ ಮೊತ್ತಕ್ಕೆ 166ರನ್ ಸೇರಿಸಿ 355 ರನ್ಗಳಿಗೆ ಸರ್ವಪತನ ಕಂಡಿತ್ತು. ಎರಡನೇ ಇನ್ನಿಂಗ್ಸ್ನಲ್ಲಿ ಸೆಹ್ವಾಗ್ರ 92 ರನ್ ಹಾಗೂ ಸ್ವತಃ ಧೋನಿಯೇ ಅಬ್ಬರದ ಅರ್ಧಶತಕ ಸಿಡಿಸಿ ಆಸ್ಟ್ರೇಲಿಯಾ ತಂಡಕ್ಕೆ 382 ರನ್‌ಗಳ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನೆಟ್ಟಿದ ಆಸ್ಟ್ರೇಲಿಯಾ 210 ರನ್ಗಳಿಗೆ ಆಲೌಟ್ ಆಗುವ ಮೂಲಕ 172 ರನ್ಗಳಿಂದ ಸೋಲನುಭವಿಸಿತ್ತು. ಭಾರತ ತಂಡ 2-0ಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಐತಿಹಾಸಿಕ ಸರಣಿ ಜಯ ಸಾಧಿಸಿತ್ತು.
2011ರ ವಿಶ್ವಕಪ್ ಫೈನಲ್ನಲ್ಲಿ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ನಿರ್ಧಾರ
2011ರ ವಿಶ್ವಕಪ್ ಫೈನಲ್ನಲ್ಲಿ ಭಾರತ ತಂಡಕ್ಕಿಂತ ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ 275 ರನ್‌ಗಳ ಗುರಿ ನೀಡಿತ್ತು. ಈ ಸಂದರ್ಭದಲ್ಲಿ ಸಚಿನ್ ಹಾಗೂ ಸೆಹ್ವಾಗ್ ವಿಕೆಟ್ ಕಳೆದುಕೊಂಡಿತ್ತು. ಇನ್ನು 113 ರನ್ಗಳಾಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಈ ಸಂದರ್ಭದಲ್ಲಿ ಟೂರ್ನಿಯಲ್ಲಿ 90ರ ಸರಾಸರಿಯಲ್ಲಿ 360 ರನ್ಗಳಿಸಿ ಅದ್ಭುತ ಪ್ರದರ್ಶನ ತೋರಿದ್ದ ಯುವರಾಜ್ ಸಿಂಗ್ ಬದಲು ತಾವೇ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದರು. ಈ ನಿರ್ಧಾರ ಹಲವರ ಹುಬ್ಬೇರುವಂತೆ ಮಾಡಿತ್ತು. ಆದರೆ, ಧೋನಿ ಫೈನಲ್ ಪಂದ್ಯದಲ್ಲಿ ಕೇವಲ 79 ಎಸೆತಗಳಲ್ಲಿ 91 ರನ್ ಸಿಡಿಸಿ ಭಾರತಕ್ಕೆ 28 ವರ್ಷಗಳ ಬಳಿಕೆ ವಿಶ್ವಕಪ್ ತಂದುಕೊಡುವಲ್ಲಿ ಯಶಸ್ವಿಯಾದರು. ಈ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನೂ ಅವರು ಪಡೆದರು.
2013ರ ಚಾಂಪಿಯನ್ ಟ್ರೋಫಿ ಫೈನಲ್ನಲ್ಲಿ ಇಶಾಂತ್ ಮೇಲೆ ನಂಬಿಕೆ
2013 ರ ಚಾಂಪಿಯನ್ ಟ್ರೋಫಿ ಫೈನಲ್ನಲ್ಲಿ ಮಳೆ ಕಾರಣ 20 ಓವರ್ಗಳ ಪಂದ್ಯ ನಡೆದಿತ್ತು. ಭಾರತ ಕೇಲವ 129 ರನ್ಗಳಿಸಿತ್ತು. 130 ರನ್‌ಗಳ ಮೊತ್ತವನ್ನು ಚೇಸ್ ಮಾಡಿದ್ದ ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು ಕೊನೆಯ 18 ಎಸೆತಗಳಲ್ಲಿ 6 ವಿಕೆಟ್ಗಳ ಇದ್ದಂತೆ 28 ರನ್‌ಗಳ ಅಗತ್ಯವಿತ್ತು.
ಈ ಸಂದರ್ಭದಲ್ಲಿ 18 ಓವರ್ ಎಸೆಯಲು ಧೋನಿ ಮುಂದೆ ಇಶಾಂತ್,ಉಮೇಶ್ ಹಾಗೂ ಭುವನೇಶ್ವರ್ ಮೂರು ಆಯ್ಕೆಗಳಿದ್ದವು. ಈಗಾಗಲೆ ಇಶಾಂತ್ ಮೊದಲ ಮೂರು ಓವರ್ಗಳಲ್ಲಿ 28 ರನ್ ಬಿಟ್ಟುಕೊಟ್ಟು ದುಬಾರಿಯಾಗಿದ್ದರು. ಆದರೂ ಧೋನಿ ಇಶಾಂತ್ಗೆ ಬೌಲಿಂಗ್ ನೀಡುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಆದರೆ,ಇಶಾಂತ್ ಕ್ರೀಸ್ನಲ್ಲಿ ಸೆಟ್ ಆಗಿದ್ದ ಇಯಾನ್ ಮಾರ್ಗನ್ ಹಾಗೂ ರವಿ ಬೊಪೆರಾ ವಿಕೆಟ್ ಪಡೆದರು. ಕೊನೆಗೆ ಭಾರತ ತಂಡ 5 ರನ್‌ಗಳ ಜಯದೊಂದಿಗೆ ಚಾಂಪಿಯನ್ ಟ್ರೋಫಿ ಮುಡಿಗೇರಿಸಿಕೊಂಡಿತು.
ಬಾಂಗ್ಲಾದೇಶದ ವಿರುದ್ಧ ಒಂದು ಕೈನ ಗ್ಲೌಸ್ ತೆಗೆದು ಕೀಪಿಂಗ್
2016ರ ಟಿ-20 ವಿಶ್ವಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧ ಕೊನೆಯ ಓವರ್‌ನಲ್ಲಿ 11 ರನ್ಗಳನ್ನು ಡಿಫೆಂಡ್ ಮಾಡಬೇಕಿತ್ತು. ಪಾಂಡ್ಯ ಎಸೆದ ಮೊದಲ ಎಸೆತದಲ್ಲಿ ಸಿಂಗಲ್ ಬಂದರೆ, ನಂತರದ ಎರಡು ಎಸೆತಗಳಲ್ಲಿ ರಹೀಮ್ ಬೌಂಡರಿ ಬಾರಿಸಿ ಗೆಲುವನ್ನು ಕಸಿದುಕೊಂಡಿದ್ದರು. ಆದರೆ, ನಾಲ್ಕು ಮತ್ತು 5ನೇ ಎಸೆತಗಳಲ್ಲಿ ರಹೀಮ್ ಹಾಗೂ ಮಹಮದುಲ್ಲಾ ಕ್ಯಾಚ್ ಔಟ್ ಆದರು. ಕೊನೆಯ ಎಸೆತದಲ್ಲಿ ಬಾಂಗ್ಲಾಗೆ ಗೆಲ್ಲಲು 2 ರನ್‌ಗಳ ಅಗತ್ಯವಿತ್ತು.ಈ ಸಂದರ್ಭದಲ್ಲಿ ಒಂದು ರನ್ಗಳಿಸಿದರೂ ಡ್ರಾಗೊಳ್ಳುವ ಸಾಧ್ಯತೆಯಿತ್ತು. ಆದರೆ ಧೋನಿ ತಮ್ಮಬಲಗೈನ ಗ್ಲೌಸ್ ತೆಗೆದು ಹಾಕಿ ಕೀಪಿಂಗ್ ಮಾಡಿದ್ದರು. ಕೊನೆಯ ಎಸೆತ ತಮ್ಮ ಕೈಗೆ ಬರುತ್ತಿದ್ದಂತೆ ವೇಗವಾಗಿ ಓಡಿ ರನ್ಔಟ್ ಮಾಡುವಲ್ಲಿ ಯಶಸ್ವಿಯಾದರು. ಕೊನೆಗೆ ಒಂದು ರನ್ನಿಂದ ಗೆದ್ದು ಕ್ವಾರ್ಟರ್ ಫೈನಲ್ ಪ್ರವೇಶಿಸಿತ್ತು.