ಮುಂಬೈ: ಟಿ20 ಸರಣಿಯಲ್ಲಿ ಅದ್ದೂರಿ ಪ್ರದರ್ಶನ ತೋರಿದ್ದ ಭಾರತ ತಂಡ ಏಕದಿನ ಸರಣಿಯಲ್ಲಿ 3-0ಯಲ್ಲಿ ಹೀನಾಯ ಸೋಲುಕಾಣುವ ಮೂಲಕ ವೈಟ್ವಾಷ್ ಮುಖಭಂಗಕ್ಕೆ ತುತ್ತಾಗಿದೆ.
31 ವರ್ಷಗಳ ಬಳಿಕ ಏಕದಿನ ಕ್ರಿಕೆಟ್ನಲ್ಲಿ ಕಳಪೆ ಕ್ಷೇತ್ರರಕ್ಷಣೆ ಹಾಗೂ ಕೆಟ್ಟ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡ ಸೋತಿದೆ. ಟಿ20 ಸರಣಿಯಲ್ಲಿ ಯಶಸ್ವಿಯಾಗಿದ್ದ ಕೊಹ್ಲಿ ನಾಯಕತ್ವ ಏಕದಿನ ಕ್ರಿಕೆಟ್ನಲ್ಲಿ ವಿಫಲವಾಗಲು ಪ್ರಮುಖ ಕಾರಣಗಳು ಇಂತಿವೆ.
ನಾಯಕನ ವೈಫಲ್ಯ:
ರನ್ ಮಷಿನ್ ಎಂದೇ ಖ್ಯಾತರಾಗಿರುವ ಟೀಂ ಇಂಡಿಯಾ ಕ್ಯಾಪ್ಟನ್ 201ರ ಬಳಿಕ ಇದೇ ಮೊದಲ ಬಾರಿಗೆ 25 ಸರಾಸರಿಗೆ ಇಳಿದಿದ್ದಾರೆ. ಈ ಸರಣಿಯಲ್ಲಿ ಕೊಹ್ಲಿ 3 ಪಂದ್ಯಗಳಿಂದ ಕೇವಲ 75 ರನ್ಗಳಿಸಲಷ್ಟೇ ಶಕ್ತವಾದರು. ಕೊಹ್ಲಿ ಮೊದಲ ಪಂದ್ಯದಲ್ಲಿ 51, ಎರಡನೇ ಪಂದ್ಯದಲ್ಲಿ 15, ಮೂರನೇ ಪಂದ್ಯದಲ್ಲಿ 9 ರನ್ಗಳಿಗೆ ವಿಕೆಟ್ ಒಪ್ಪಿಸಿದರು. ಭಾರತ ಕ್ಲೀನ್ ಸ್ವೀಪ್ ಸೋಲಿಗೆ ತುತ್ತಾಗಲು ಕೊಹ್ಲಿ ಬ್ಯಾಟಿಂಗ್ ವೈಫಲ್ಯವೂ ಒಂದು ಕಾರಣ.
ಸರಣಿಯಲ್ಲಿ ಬುಮ್ರಾ ಶೂನ್ಯ ವಿಕೆಟ್ ಸಾಧನೆ:
ಏಕದಿನ ಕ್ರಿಕೆಟ್ನಲ್ಲಿ ನಂಬರ್ ಒನ್ ಬೌಲರ್ ಆಗಿರುವ ಜಸ್ಪ್ರೀತ್ ಬುಮ್ರಾ ಸರಣಿಯ ಮೂರು ಪಂದ್ಯಗಳಲ್ಲಿ 30 ಓವರ್ ಮಾಡಿದ್ದಾರೆ. 5.56 ಎಕಾನಮಿಯಲ್ಲಿ 167 ರನ್ ಬಿಟ್ಟುಕೊಟ್ಟಿದ್ದು, ಒಂದೇ ಒಂದು ವಿಕೆಟ್ ಪಡೆಯುವಲ್ಲಿಯೂ ಅವರು ಸಫಲರಾಗಲಿಲ್ಲ. ಇದು ಭಾರತಕ್ಕೆ ದೊಡ್ಡ ಹೊಡತವನ್ನೇ ನೀಡಿತು.
ಆರಂಭಿಕರ ಬ್ಯಾಟ್ಸ್ಮನ್ಗಳ ವೈಫಲ್ಯ:
ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಗಾಯಕ್ಕೆ ತುತ್ತಾಗಿದ್ದರಿಂದ ಮಯಾಂಕ್ ಅಗರ್ವಾಲ್ ಹಾಗೂ ಪೃಥ್ವಿ ಶಾ ಇಬ್ಬರೂ ಏಕದಿನ ಕ್ರಿಕೆಟ್ ಒಂದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದರು. ಆದರೆ, ಈ ಇಬ್ಬರು ಮೂರು ಪಂದ್ಯಗಳಲ್ಲಿ ಉತ್ತಮ ಆರಂಭ ನೀಡಲು ವಿಫಲರಾಗಿದ್ದು ತಂಡದ ರನ್ಗಳಿಕೆಗೆ ಕಡಿವಾಣ ಹಾಕಿದ್ದಲ್ಲದೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಮೇಲೆ ಒತ್ತಡ ಹಚ್ಚಾಗಲು ಕಾರಣವಾಯಿತು. ಈ ಸರಣಿಯಲ್ಲಿ ಮಯಾಂಕ್ 32, 03 , 01 ಹಾಗೂ ಪೃಥ್ವಿ ಶಾ 20, 24, 40 ರನ್ಗಳಿಸಿ ಬಹುಬೇಗನೆ ವಿಕೆಟ್ ಕೈಚೆಲ್ಲಿಕೊಂಡರು.
ಆರಂಭಿಕ ಸ್ಥಾನದಿಂದ ಕೆ.ಎಲ್.ರಾಹುಲ್ ಹಿಂಬಡ್ತಿ:
ಈ ಸರಣಿಗೂ ಹಿಂದಿನ ಸರಣಿಗಳಲ್ಲಿ ಆರಂಭಿಕರ ಅನುಪಸ್ಥಿತಿಯಲ್ಲಿ ಉತ್ತಮವಾಗಿ ಬ್ಯಾಟಿಂಗ್ ನಡೆಸಿದ್ದ ರಾಹುಲ್ ತಂಡದಲ್ಲಿದ್ದರೂ, ಇಬ್ಬರೂ ಹೊಸ ಬ್ಯಾಟ್ಸ್ಮನ್ಗಳನ್ನು ಇನ್ನಿಂಗ್ಸ್ ಆರಂಭಿಸಲು ಬಿಟ್ಟದ್ದು ಕೊಹ್ಲಿ ಪಡೆಗೆ ಮಾರಕವಾಯಿತು. ರಾಹುಲ್ ವಿಶ್ವಕಪ್ನಲ್ಲಿ ಧವನ್ ಬದಲಿಗೆ ಆರಂಭಿಕನಾಗಿ ಬ್ಯಾಟ್ ಬೀಸಿ ಉತ್ತಮ ರನ್ಗಳಿಸಿದ್ದರು. ರಾಹುಲ್ ಮಧ್ಯಮ ಕ್ರಮಾಂಕದಲ್ಲೂ ಉತ್ತಮ ರನ್ಗಳಿಸಿದರಾದರೂ ಆರಂಭಿಕನಾಗಿದ್ದರೆ ತಂಡದ ಬಲ ಹೆಚ್ಚಾಗುತ್ತಿತ್ತು. ರಾಹುಲ್ ಆರಂಭಿಕನಾಗಿದ್ದರೆ, ಪಂತ್ ಅಥವಾ ಮನೀಷ್ ಪಾಂಡೆ ತಂಡದಲ್ಲಿ ಅವಕಾಶ ಪಡೆಯುತ್ತಿದ್ದರು. ಆದರೆ ಯುವ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆಯಿಟ್ಟದ್ದು ಭಾರತದ ಸೋಲಿಗೆ ಕಾರಣವಾಯಿತು.
ಫೀಲ್ಡಿಂಗ್ ವೈಫಲ್ಯ:
ಮೊದಲ ಪಂದ್ಯದಲ್ಲಿ 347 ರನ್ಗಳಿಸಿಯೂ ಸೋಲುಕಾಣಲು ಕಳಪೆ ಫೀಲ್ಡಿಂಗ್ ಪ್ರಮುಖ ಕಾರಣವಾಯಿತು. ಕಿವೀಸ್ ತಂಡವನ್ನು ಗೆಲ್ಲಿಸಿದ ರಾಸ್ ಟೇಲರ್ ಜೀವದಾನ ಪಡೆದು ಭರ್ಜರಿ ಬ್ಯಾಟಿಂಗ್ ನಡೆಸಿ ದಾಖಲೆಯ ಮೊತ್ತವನ್ನು ಚೇಸ್ ಮಾಡುವಲ್ಲಿ ಸಫಲರಾದರು. ಇನ್ನು ರನ್ ಉಳಿಸುವಲ್ಲಿಯೂ ಭಾರತದ ಫೀಲ್ಡರ್ಗಳು ವಿಫಲರಾದರು. ಕ್ಷೇತ್ರರಕ್ಷಣೆಯಲ್ಲಿ ಚುರುಕಿಲ್ಲದ್ದರಿಂದ ಕಿವೀಸ್ ಬ್ಯಾಟ್ಸ್ಮನ್ಗಳ ದಾರಾಳವಾಗಿ ರನ್ಗಳಿಸಿಕೊಂಡರು.
ಕಳಪೆ ಬೌಲಿಂಗ್:
ಟಿ20 ಸರಣಿಯಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ಮೊಹಮ್ಮದ್ ಶಮಿ, ಶಾರ್ದೂಲ್ ಠಾಕೂರ್ ಹಾಗೂ ಬುಮ್ರಾ ಏಕದಿನ ಸರಣಿಯಲ್ಲಿ ಕಳಪೆ ಬೌಲಿಂಗ್ ಪ್ರದರ್ಶನ ತೋರಿದರು. ಅದರಲ್ಲೂ ಶಾರ್ದೂಲ್ ಠಾಕೂರ್ ಹೆಚ್ಚು ರನ್ ಬಿಟ್ಟದ್ದು ತಂಡಕ್ಕೆ ಹಿನ್ನೆಡೆಯಾಯಿತು.
ಈ ಮೇಲಿನ ಎಲ್ಲಾ ಕಾರಣಗಳು ಭಾರತ ತಂಡದ ಸರಣಿ ಸೋಲಿಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣಗಳಾಗಿವೆ.