ಲಂಡನ್: ಸಚಿನ್ ಅವರ ನೂರನೇ ಶತಕ ಸಿಡಿಸುವ ಅವಕಾಶ ತಪ್ಪಿ ಹೋಗಿದ್ದಕ್ಕೆ ಅವರ ಅಭಿಮಾನಿಗಳು ನನೆಗೆ ಮತ್ತು ಅಂಪೈರ್ ರಾಡ್ ಟಕ್ಕರ್ಗೂ ಜೀವ ಬೆದರಿಕೆ ಕೆರೆ ಮಾಡಿದ್ದರು ಎಂದು ಇಂಗ್ಲೆಂಡ್ ಮಾಜಿ ವೇಗಿ ಟಿಮ್ ಬ್ರೆಸ್ನನ್ ಬಹಿರಂಗಗೊಳಿಸಿದ್ದಾರೆ.
2011ರ ಓವೆಲ್ ಟೆಸ್ಟ್ ಪಂದ್ಯದಲ್ಲಿ ಸಚಿನ್ 91 ರನ್ಗಳಿಸಿದ್ದರು. ಇನ್ನು 9 ರನ್ಗಳಿಸಿದ್ದರೆ ಅವರ ಶತಕಗಳ ಶತಕ ದಾಖಲಾಗುತ್ತಿತ್ತು. ಆದರೆ, ಟಿಮ್ ಬ್ರೆಸ್ನನ್ ಬೌಲಿಂಗ್ನಲ್ಲಿ ಸಚಿನ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದಿದ್ದರು. ಆದರೆ, ಚೆಂಡು ಲೆಗ್ಸ್ಟಂಪ್ ಮಿಸ್ ಆದಂತೆ ಕಂಡು ಬಂದಿದ್ದರಿಂದ ಅಂಪೈರ್ ಟಕ್ಕರ್ ಹಾಗೂ ಬ್ರೆಸ್ನನ್ಗೆ ಬೆದರಿಕೆ ಕರೆಗಳು ಬಂದಿದ್ದವು ಎಂದು ಬ್ರೆಸ್ನನ್ ತಿಳಿಸಿದ್ದಾರೆ,
"ಅದು ಓವೆಲ್ನಲ್ಲಿ ನಡೆದಿದ್ದ ಟೆಸ್ಟ್ ಸರಣಿಯ ಕೊನೆಯ ಪಂದ್ಯ. ಆ ಚೆಂಡು ಲೆಗ್ ಸ್ಟಂಪ್ ತಪ್ಪಿದಂತೆ ಕಂಡಿತ್ತು. ಆಸ್ಟ್ರೇಲಿಯಾದ ಅಂಪೈರ್ ಟಕ್ಕರ್ ಸಚಿನ್ ಅವರನ್ನು ಔಟ್ ಎಂದು ತೀರ್ಪು ನೀಡಿದ್ದರು. ಆ ವೇಳೆ, ಸಚಿನ್ 80(91) ಕ್ಕೂ ಹೆಚ್ಚು ರನ್ಗಳಿಸಿದ್ದರು. ಖಂಡಿತವಾಗಿಯೂ ನೂರು ರನ್ ಪೂರ್ಣಗೊಳಿಸುತ್ತಿದ್ದರು. ನಾವು ಸರಣಿ ಗೆದ್ದು ಟೆಸ್ಟ್ ಶ್ರೇಯಾಂಕದಲ್ಲಿ ಮೊದಲ ಸ್ಥಾನಕ್ಕೇರಿದೆವು" ಎಂದು ಇಂಗ್ಲೆಂಡ್ ಪರ 23 ಟೆಸ್ಟ್ , 85 ಏಕದಿನ ಪಂದ್ಯ ಹಾಗೂ 34 ಟಿ-20 ಪಂದ್ಯಗಳನ್ನಾಡಿರುವ 35 ವರ್ಷದ ಟಿಮ್ ಬ್ರೆಸ್ನನ್ ಹೇಳಿದ್ದಾರೆ.
ಆದರೆ, ಸಚಿನ್ರ ಶತಕಗಳ ಶತಕ ತಪ್ಪಿಸಿದ್ದಕ್ಕೆ ತಮಗೂ ಹಾಗೂ ಅಫೈರ್ ರಾಡ್ ಟಕ್ಕರ್ಗೂ ಜೀವ ಬೆದರಿಕೆ ಕರೆಗಳು ಬಂದಿದ್ದವು ಎಂದು ಬ್ರೆಸ್ನನ್ ಬಹಿರಂಗ ಪಡಿಸಿದ್ದಾರೆ.
"ನಾವಿಬ್ಬರು ಬೆದರಿಕೆ ಕರೆ ಸ್ವೀಕರಿಸಿದ್ದೆವು. ಸಚಿನ್ರ ಶತಕ ತಪ್ಪಿಸಿದ್ದಕ್ಕೆ ಬಹಳ ದಿನಗಳವರೆಗೆ ನನಗೆ ಮತ್ತು ಅಂಪೈರ್ ಇಂತಹ ಕರೆಗಳನ್ನ ಸಾಕಷ್ಟು ಸ್ವೀಕರಿಸಿದ್ದೆವು, ನನಗೆ ಟ್ವಿಟರ್ನಲ್ಲಿ ಹಾಗೂ ಅಂಪೈರ್ ಟಕ್ಕರ್ ಮನೆಯ ವಿಳಾಸಕ್ಕೆ ಪತ್ರ ಬರೆಯುವ ಮೂಲಕ ಬೆದರಿಕೆವೊಡ್ಡಲಾಗುತ್ತಿತ್ತು. ಲೆಗ್ ಮಿಸ್ ಆಗಿದ್ದರೂ ಅವರನ್ನು(ಸಚಿನ್) ಔಟ್ ಎಂದು ತೀರ್ಪು ಕೊಡಲು ಎಷ್ಟು ಧೈರ್ಯ ಎಂದು ಟಕ್ಕರ್ಗೆ ಸಂದೇಶಗಳು ಬರುತ್ತಿದ್ದವು, ಅಪರಿಚಿತರ ಬೆದರಿಕೆಯಿಂದ ಟಕ್ಕರ್ ಪೊಲೀಸ್ ಭದ್ರತೆಯನ್ನು ಹೆಚ್ಚಿಸಿಕೊಂಡಿದ್ದರು" ಎಂದು ಇಂಗ್ಲೆಂಡ್ ಮಾಜಿ ವೇಗಿ ತಿಳಿಸಿದ್ದಾರೆ.
ಇನ್ನು ಸಚಿನ್ ತೆಂಡೂಲ್ಕರ್ ತಮ್ಮ 99 ನೇ ಶತಕವನ್ನು 2011ರ ವಿಶ್ವಕಪ್ನಲ್ಲಿ ದಕ್ಚಿಣ ಆಫ್ರಿಕಾ ವಿರುದ್ಧ ಸಿಡಿಸಿದ್ದರು. ನಂತರ 2012ರ ಏಷ್ಯಾಕಪ್ನಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ಶತಕಗಳ ಶತಕ ಪೂರ್ಣಗೊಳಿಸಿದ್ದರು.