ಅಬುಧಾಬಿ: ಭಾರತೀಯರಾದ ಅನುಭವಿ ಲೆಗ್ ಸ್ಪಿನ್ನರ್ ಪ್ರವೀಣ್ ತಂಬೆ, ಬಲಗೈ ಮಧ್ಯಮ ವೇಗಿ ಇಶಾನ್ ಮಲ್ಹೋತ್ರಾ ಮತ್ತು ಲೆಗ್ ಸ್ಪಿನ್ನರ್ ಪ್ರಶಾಂತ್ ಗುಪ್ತಾ, ಅಬುಧಾಬಿ ಟಿ-10ರ ನಾಲ್ಕನೇ ಆವೃತ್ತಿಯಲ್ಲಿ ಆಡಲಿದ್ದಾರೆ. ಮುಂದಿನ ವರ್ಷ ಜನವರಿ 28ರಿಂದ ಫೆಬ್ರವರಿ 6ರವರೆಗೆ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿವೆ.
ಆಗಸ್ಟ್ನಲ್ಲಿ, ಪ್ರವೀಣ್ ತಂಬೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಸಿಪಿಎಲ್) ಟ್ರಿನ್‌ಬಾಗೊ ನೈಟ್ ರೈಡರ್ಸ್ (ಟಿಕೆಆರ್) ತಂಡವನ್ನು ಪ್ರತಿನಿಧಿಸುವ ಮೂಲಕ ಸಿಪಿಎಲ್ನಲ್ಲಿ ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 49ರ ಹರೆಯದ ಪ್ರವೀಣ್, 2013ರಲ್ಲಿ ತಮ್ಮ 41ನೇ ವಯಸ್ಸಿನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ್ದರು. ಈವರೆಗೆ ಎಲ್ಲಾ ಐಪಿಎಲ್ ಆವೃತ್ತಿಗಳಲ್ಲಿ ಅವರು 33 ಪಂದ್ಯಗಳನ್ನು ಆಡಿದ್ದು, 28 ವಿಕೆಟ್ ಪಡೆದಿದ್ದಾರೆ.
ಅರೇಬಿಯನ್ನರು ಆಯ್ಕೆ ಮಾಡಿರುವ ಸ್ಪಿನ್ನರ್ ಇಶಾನ್ ಮಲ್ಹೋತ್ರಾ, ಐಪಿಎಲ್ 2011ರ ಸಂದರ್ಭದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಡೆಕ್ಕನ್ ಚಾರ್ಜರ್ಸ್ ಪರ ಒಂದು ಪಂದ್ಯ ಆಡಿದ್ದರು.
ಡೆಕ್ಕನ್ ಗ್ಲಾಡಿಯೇಟರ್ಸ್ ಆಯ್ಕೆ ಮಾಡಿದ ಗುಪ್ತಾ 2008ರಿಂದ 2019ರವರೆಗೆ ಉತ್ತರ ಪ್ರದೇಶ ಮತ್ತು ರೈಲ್ವೆ ಪರ ದೇಶೀಯ ಕ್ರಿಕೆಟ್ ಆಡಿದ್ದರು.
ಕಳೆದ ವರ್ಷ ನಡೆದಿದ್ದ ಅಬುಧಾಬಿ ಟಿ-10ರ ಮೂರನೇ ಆವೃತ್ತಿಯಲ್ಲಿ ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಹಾಗೂ ಮಾಜಿ ವೇಗಿ ಜಹೀರ್ ಖಾನ್ ಲೀಗ್‌ನಲ್ಲಿ ಪದಾರ್ಪಣೆ ಮಾಡಿದ್ದರು. ಯುವರಾಜ್ ಅರೇಬಿಯನ್ನರ ಪರ ಆಡಿದ್ದರೆ, ಜಹೀರ್ ಖಾನ್ ದೆಹಲಿ ಬುಲ್ಸ್ ಪರ ಆಡಿದ್ದರು.
ಎಸ್.ಬದ್ರಿನಾಥ್ ಮತ್ತು ಮುನಾಫ್ ಪಟೇಲ್ ಕೂಡಾ ಹಿಂದಿನ ಟಿ-10 ಲೀಗ್‌ನ ಆವೃತ್ತಿಗಳಲ್ಲಿ ಆಡಿದ್ದಾರೆ.