ಲಂಡನ್: 2019ರ ವಿಶ್ವಕಪ್ನಲ್ಲಿ ಚಾಂಪಿಯನ್ ಆಗಿರುವ ಇಂಗ್ಲೆಂಡ್ ವಿಜಯಯಾತ್ರೆ ಇದೀಗ ಶುರುವಾಗಿದೆ. ಆದರೆ ಇದು ಆರಂಭ ಮಾತ್ರ, ಎಲ್ಲಾ ಕ್ರಿಕೆಟ್ ಮಾದರಿಗಳಲ್ಲಿ ನಮ್ಮ ತಂಡ ಪ್ರಾಬಲ್ಯ ಸಾಧಿಸಲಿದೆ ಎಂದು ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ವಿಶ್ವಕಪ್ಗೋಸ್ಕರ ಇಡೀ ತಂಡ ಸಾಕಷ್ಟು ಶ್ರಮಪಟ್ಟಿತ್ತು. ಬಲಿಷ್ಠವಾದ ತಂಡ ಕಟ್ಟಿದ್ದ ಇಂಗ್ಲೆಂಡ್ ಕ್ರಿಕೆಟ್ ಆಡಳಿತ ಮಂಡಳಿ ಏಕದಿನ ಕ್ರಿಕೆಟ್ನಲ್ಲಿ ಪ್ರಾಬಲ್ಯ ಸಾಧಿಸಿತ್ತು.
ತವರಿನಲ್ಲಿ ನಡೆದ 12ನೇ ವಿಶ್ವಕಪ್ನಲ್ಲಿ ಆರಂಭದಲ್ಲಿ ಅಬ್ಬರಿಸಿ, ಮಧ್ಯಂತರದಲ್ಲಿ ಸೋಲನುಭವಿಸಿ ಮತ್ತೆ ಕೊನೆಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತ್ತು. ಅಲ್ಲೂ ಆಸ್ಟ್ರೇಲಿಯಾ ವಿರುದ್ಧ ಏಕಪಕ್ಷೀಯವಾಗಿ ಗೆಲುವು ಸಾಧಿಸಿತ್ತು. ನಂತರ ಫೈನಲ್ನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಬೌಂಡರಿಗಳ ಆಧಾರದ ಮೇಲೆ ಗೆಲುವು ಸಾಧಿಸಿ ಚಾಂಪಿಯನ್ ಆಗಿದೆ.
ಇಂಗ್ಲೆಂಡ್ ಪ್ರದರ್ಶನ ಕುರಿತು ಟೆಲಿಗ್ರಾಫ್ಗೆ ಲೇಖನ ಬರೆದಿರುವ ಮೈಕಲ್ ವಾನ್, ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಇಂಗ್ಲೆಂಡ್ ಪ್ರಾಬಲ್ಯ ಈಗ ಶುರುವಾಗಿದೆ. ವಿಶ್ವಕಪ್ ಗೆಲುವು ಆರಂಭ ಮಾತ್ರ. ಇನ್ಮುಂದೆ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಇಂಗ್ಲೆಂಡ್ ತನ್ನ ಪ್ರಾಬಲ್ಯ ಮೆರೆಯಲಿದೆ ಎಂದು ಭವಿಷ್ಯ ನುಡಿದಿದ್ದಾರೆ.