ಸಿಡ್ನಿ(ಆಸ್ಟ್ರೇಲಿಯಾ): ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ವೇಳೆ ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಜನಾಂಗೀಯವಾಗಿ ನಿಂದಿಸಲಾಗಿದೆ ಎಂಬ ಆರೋಪದ ನಂತರ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ಮೈಕ್ ಹಸ್ಸಿ ಮತ್ತು ಶೇನ್ ವಾರ್ನ್ ಅವರು, ಕೆಲ ಪ್ರೇಕ್ಷಕರ ವರ್ಣಭೇದ ನೀತಿಯ ನಿಂದನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ
"ಇದು ತುಂಬಾ ಭಯಾನಕ ನಡವಳಿಕೆ ಮತ್ತು ಈ ಯುಗದಲ್ಲಿ ಇನ್ನೂ ನಡೆಯುತ್ತಿದೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಇಂಥ ವರ್ತನೆ ತೋರುವ ಜನರು ಮೈದಾನಕ್ಕೆ ಬರುವುದನ್ನು ನಿಷೇಧಿಸಬೇಕು" ಮೈಕ್ ಹಸ್ಸಿ ಹೇಳಿದ್ದಾರೆ.
"ನಮ್ಮನ್ನು ರಂಜಿಸಲು, ಉತ್ತಮ ಕ್ರಿಕೆಟ್ ಆಡಲು ಭಾರತೀಯರು ನಮ್ಮ ಊರಿಗೆ ಬಂದಿದ್ದಾರೆ, ಲೈವ್ ಕ್ರೀಡೆಯನ್ನು ವೀಕ್ಷಿಸುತ್ತಿರುವ ನಾವು ತುಂಬಾ ಕೃತಜ್ಞರಾಗಿರಬೇಕು. ಆಟಗಾರನ್ನು ಹೀಗೆ ನಡೆಸಿಕೊಳ್ಳುವುದು ಸ್ವೀಕಾರಾರ್ಹವಲ್ಲ" ಎಂದಿದ್ದಾರೆ.
ಓದಿ ಮತ್ತೆ ಆಸೀಸ್ ಅಭಿಮಾನಿಗಳಿಂದ ಸಿರಾಜ್ಗೆ ನಿಂದನೆ: ಕೆಲವರನ್ನು ಹೊರ ದಬ್ಬಿದ ಭದ್ರತಾ ಸಿಬ್ಬಂದಿ
ಹಸ್ಸಿ ಅವರ ಮಾತನ್ನು ಒಪ್ಪಿದ ಶೇನ್ ವಾರ್ನ್, ಕಳೆದ ಒಂದು ವರ್ಷದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ನೋಡಿದರೆ ಇಂಥ ಬೆಳವಣಿಗೆಗಳು ಚಿಂತಾಜನಕವಾಗಿವೆ. ಇದು ಜನಾಂಗೀಯ ಸಮಾನತೆಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಶನಿವಾರವಷ್ಟೆ ಬುಮ್ರಾ, ಸಿರಾಜ್ ಅವರನ್ನು ಮೈದಾನದಲ್ಲಿ ಪ್ರೇಕ್ಷಕರು ನಿಂದಿಸಿರುವ ಬಗ್ಗೆ ಬಿಸಿಸಿಐ ದೂರು ನೀಡಿತ್ತು. ಆದರೆ ಇಂದೂ ಕೂಡ ಅಂಥದ್ದೇ ಘಟನೆ ನಡೆದಿದ್ದು, ಜಂಟಲ್ಮ್ಯಾನ್ ಗೇಮ್ನಲ್ಲಿ ಇಂಥ ವರ್ತನೆ ಸರಿಯಲ್ಲ ಎಂದು ಮಾಜಿ ಕ್ರಿಕೆಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.