ಬೆಂಗಳೂರು: ಭಾರತೀಯ ಕ್ರಿಕೆಟ್‌ನ ಬೌಲಿಂಗ್ ದಂತಕಥೆ ಬಾಪು ನಾಡಕರ್ಣಿ ಇತ್ತೀಚೆಗೆ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ತೋಳಿಗೆ ಕಪ್ಪುಪಟ್ಟಿ ಧರಿಸಿರುವ ಭಾರತೀಯ ಕ್ರಿಕೆಟ್ ತಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಸೀಸ್ ವಿರುದ್ಧ ಕಣಕ್ಕಿಳಿದಿದೆ.
ದೇಶ ಕಂಡ ಅಪರೂಪದ ಕ್ರಿಕೆಟ್ ಸಾಧಕ:
ಭಾರತದ ಪರ 41 ಟೆಸ್ಟ್ ಪಂದ್ಯಗಳನ್ನಾಡಿರುವ ನಾಡಕರ್ಣಿ, ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಹಾಗೂ ಮುಂಬೈ ಕ್ರಿಕೆಟ್ ಅಸೋಸಿಯೇಷನ್ನಲ್ಲಿಯೂ ಸೇವೆ ಸಲ್ಲಿಸಿದ್ದರು. ಜನವರಿ 17ರಂದು 86 ವರ್ಷದ ಬಾಪು ನಾಡಕರ್ಣಿ ಮುಂಬೈನ ತಮ್ಮ ಮಗಳ ಮನೆಯಲ್ಲಿ ಮೃತಪಟ್ಟಿದ್ದರು.
ಆಸೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ನಾಡಕರ್ಣಿ ಅವರಿಗೆ ಗೌರವಯುತ ಸಂತಾಪ ಸೂಚಿಸಲು ಭಾರತ ತಂಡದ ಎಲ್ಲಾ ಆಟಗಾರರು ತೋಳಿಗೆ ಕಪ್ಪುಪಟ್ಟಿ ಧರಿಸಿ ಆಡುತ್ತಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ.
ಸತತ 21 ಮೆಡನ್ ಓವರ್ ಎಸೆದು ವಿಶ್ವದಾಖಲೆ:
ಬಾಪು ನಾಡಕರ್ಣಿ ವಿಶ್ವ ಕ್ರಿಕೆಟ್ ಕಂಡಂತಹ ಒಬ್ಬ ಎಕನಾಮಿಕಲ್ ಬೌಲರ್ ಆಗಿದ್ದರು. ಅವರು 9,165 ಎಸೆತಗಳಲ್ಲಿ 1.67 ಎಕಾನಮಿಯಲ್ಲಿ 2,559 ರನ್ ನೀಡಿದ್ದಾರೆ. ಒಟ್ಟು 2,000 ಕ್ಕೂ ಹೆಚ್ಚು ಎಸೆತಗಳನ್ನೆಸೆದಿರುವ ಬೌಲರ್ಗಳಲ್ಲಿ ನಾಡಕರ್ಣಿ ಇಂದಿಗೂ ಅತ್ಯುತ್ತಮ ಬೌಲರ್ ಎನಿಸಿದ್ದಾರೆ. 1964ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಸತತ 21 ಮೆಡನ್ ಓವರ್ ಎಸೆದು ವಿಶ್ವದಾಖಲೆ ಬರೆದಿದ್ದರು.