ಮ್ಯಾಂಚೆಸ್ಟರ್: ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ಮಹಾಟೂರ್ನಿಯಲ್ಲಿ ಭಾನುವಾರ ನ್ಯೂಜಿಲ್ಯಾಂಡ್-ಇಂಗ್ಲೆಂಡ್ ಮಧ್ಯೆ ಫೈನಲ್ ಫೈಟ್ ನಡೆಯಲಿದೆ. ಈಗಾಗಲೇ ಟೀಂ ಇಂಡಿಯಾ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ವಿರುದ್ಧ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದರೂ ಭಾರತಕ್ಕೆ ವಾಪಸ್ ಆಗಿಲ್ಲ.
ಜುಲೈ 10ರಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಕಿವೀಸ್ ವಿರುದ್ಧ 18ರನ್ಗಳ ಸೋಲು ಅನುಭವಿಸಿ, ಟೂರ್ನಿಯಿಂದ ಹೊರಬಿದ್ದಿದೆ. ಪಂದ್ಯ ಮುಗಿದು ಎರಡು ದಿನಗಳಾಗಿದ್ದರೂ ಕೊಹ್ಲಿ ಸೈನ್ಯ, ತಂಡದ ವ್ಯವಸ್ಥಾಪಕರು, ಸಹಾಯಕ ಸಿಬ್ಬಂದಿ ಇಂಗ್ಲೆಂಡ್ನಲ್ಲೇ ಉಳಿದುಕೊಂಡಿದ್ದಾರೆ. ಇದಕ್ಕೆ ಕಾರಣ ವಾಪಸ್ ಭಾರತಕ್ಕೆ ಬರಲು ಫ್ಲೈಟ್ ಟಿಕೆಟ್ ಲಭ್ಯವಾಗದೇ ಇರುವುದು ಎಂದು ತಿಳಿದು ಬಂದಿದೆ.
ಜುಲೈ 14ರ ಭಾನುವಾರ ಲಾರ್ಡ್ಸ್ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಅದಾದ ಬಳಿಕ ಟೀಂ ಇಂಡಿಯಾ ಭಾರತಕ್ಕೆ ವಾಪಸ್ ಆಗಲಿದೆ. ತಂಡ ವಾಪಸ್ ಬರುವಂತೆ ಮಾಡಲು ಬಿಸಿಸಿಐ ಹರಸಾಹಸ ಪಡುತ್ತಿದ್ದರೂ ಟಿಕೆಟ್ ಲಭ್ಯವಾಗದ ಕಾರಣ ಅಲ್ಲೇ ಉಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಟಿಕೆಟ್ ವಾಪಸ್
ಇನ್ನೊಂದೆಡೆ, ಟೀಂ ಇಂಡಿಯಾ ಫೈನಲ್ಗೆ ಲಗ್ಗೆ ಹಾಕುತ್ತದೆ ಎಂಬ ವಿಶ್ವಾಸದಲ್ಲಿ ಕ್ರೀಡಾಭಿಮಾನಿಗಳು ಫೈನಲ್ ಪಂದ್ಯದ ಟಿಕೆಟ್ ಪಡೆದುಕೊಂಡಿದ್ದರು. ಆದರೆ ಭಾರತ ಸೋಲು ಕಂಡಿದ್ದರಿಂದ ತಾವು ಪಡೆದುಕೊಂಡಿರುವ ಟಿಕೆಟ್ ಬೇರೆಯವರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.