ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ, ಟಿ-20 ಹಾಗೂ ಟೆಸ್ಟ್ ಸರಣಿಗಾಗಿ ನಾಳೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಪ್ರಕಟಗೊಳ್ಳಲಿದ್ದು, ಆಯ್ಕೆ ಸಮಿತಿ ಕೆಲವೊಂದು ಹೊಸ ಉದಯೋನ್ಮುಖ ಪ್ರತಿಭೆಗಳಿಗೆ ಮಣೆ ಹಾಕುವ ಸಾಧ್ಯತೆ ದಟ್ಟವಾಗಿ ಗೋಚರವಾಗುತ್ತಿದೆ.
ಅಗಸ್ಟ್ 3ರಿಂದ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಕ್ರಿಕೆಟ್ ಸರಣಿ ಆಡಲಿದ್ದು, ಅದಕ್ಕಾಗಿ ನಾಳೆ ಆಯ್ಕೆ ಸಮಿತಿ ತಂಡ ಪ್ರಕಟ ಮಾಡಲಿದೆ. 2023ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ಕೆಲವೊಂದು ಹೊಸ ಪ್ರತಿಭೆಗಳಿಗೆ ಚಾನ್ಸ್ ಸಿಗುವ ಸಾಧ್ಯತೆ ಇದೆ.
ವಿಶ್ವಕಪ್ನ ಮಧ್ಯದಲ್ಲೇ ಹೊರಬಿದ್ದಿರುವ ಶಿಖರ್ ಧವನ್ ಹಾಗೂ ವಿಜಯ್ ಶಂಕರ್ ಇದೀಗ ಫಿಟ್ ಆಗಿದ್ದು, ಒಬ್ಬರು ಚಾನ್ಸ್ ಪಡೆದುಕೊಳ್ಳುವ ಸಾಧ್ಯತೆ ಇದೆ. ಉಳಿದಂತೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವನೇಶ್ವರ್ ಕುಮಾರ್ಗೆ ವಿಶ್ರಾಂತಿ ನೀಡುವ ಸಾಧ್ಯತೆ ದಟ್ಟವಾಗಿದೆ. ಅವರ ಸ್ಥಾನಕ್ಕೆ ನವದೀಪ್ ಸೈನಿ, ದೀಪಕ್ಚಹರ್ ಹಾಗೂ ಖಲೀಲ್ ಅಹ್ಮದ್ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ.
ಉಳಿದಂತೆ ಕನ್ನಡಿಗ ಮಯಾಂಕ್ ಅಗರವಾಲ್, ಶುಭಮನ್ ಗಿಲ್ ಹಾಗೂ ಮನೀಷ್ ಪಾಂಡೆ ರೇಸ್ನಲ್ಲಿದ್ದು, ಶ್ರೇಯಸ್ ಅಯ್ಯರ್ ಕೂಡ ಸ್ಥಾನ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿ ಕಾಣುತ್ತಿದೆ. ವೆಸ್ಟ್ ಇಂಡೀಸ್ ಎ ತಂಡದ ವಿರುದ್ಧ ಗಿಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಒಂದು ವೇಳೆ ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್ಗೆ ವಿಶ್ರಾಂತಿ ನೀಡಿದರೆ, ರಾಹುಲ್ ಚಹರ್ ಅಥವಾ ಶ್ರೇಯಸ್ ಗೋಪಾಲ್ ಸೇರ್ಪಡೆಯಾಗಬಹುದು. ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಕನ್ನಡಿಗ ಶ್ರೇಯಸ್ ಗೋಪಾಲ್ ಉತ್ತಮ ಪ್ರದರ್ಶನ ನೀಡಿದ್ದು, ಹ್ಯಾಟ್ರಿಕ್ ವಿಕೆಟ್ ಸೇರಿದಂತೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ರಂತಹ ದಿಗ್ಗಜ ಆಟಗಾರರ ವಿಕೆಟ್ ಪಡೆದುಕೊಂಡಿದ್ದಾರೆ.
ಇನ್ನು ವಿಕೆಟ್ ಕೀಪಿಂಗ್ನಲ್ಲಿ ರಿಷಭ್ ಪಂತ್, ಇಶನ್ ಕಿಶನ್ ಹಾಗೂ ಸಂಜು ಸ್ಯಾಮ್ಸನ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇದರ ಜತೆಗೆ ಬ್ಯಾಟ್ಸ್ಮನ್ಗಳಾದ ಪ್ರಿಯಾಂಕ್ ಪಂಚೋಲ್, ಅಭಿಮನ್ಯು ಈಶ್ವರನ್,ಕೆಎಸ್ ಭರತ್ ಕೂಡ ರೇಸ್ನಲ್ಲಿದ್ದಾರೆ.